ಹಾಸನ: ಜಿಲ್ಲೆಯಲ್ಲಿ (Hassan) ಹಾದು ಹೋಗುವ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ (Bengaluru – Mangaluru National Highway) ನೂತನ ಟೋಲ್ (Toll) ಆರಂಭವಾಗಿದ್ದು, ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಆಲೂರು ತಾಲೂಕಿನ ಚೌಲಗೆರೆ ಬಳಿಯ ಹೆದ್ದಾರಿಯಲ್ಲಿ ಸುಂಕ ವಸೂಲಿ ಕೇಂದ್ರ ಆರಂಭವಾಗಿದೆ. ಟೋಲ್ ಸಂಗ್ರಹಕ್ಕೆ ಸ್ಥಳೀಯರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ. ಸಕಲೇಶಪುರದ ಮಾರನಹಳ್ಳಿವರೆಗೂ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೂ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ನಿಯಮಾವಳಿ ಪ್ರಕಾರ ಪ್ರತಿ 50 ರಿಂದ 60 ಕಿಮೀ ಅಂತರದಲ್ಲಿ ಸುಂಕ ವಸೂಲಿ ಕೇಂದ್ರ ಇರಬೇಕು. ಶಾಂತಿಗ್ರಾಮ ಸುಂಕ ವಸೂಲಿ ಕೇಂದ್ರಕ್ಕೂ ಆಲೂರು ತಾಲ್ಲೂಕಿನ ಚೌಲಗೆರೆ ಬಳಿಯ ಟೋಲ್‌ಗೂ ಕೇವಲ 30 ಕಿಮೀ ದೂರ ಇದೆ. ನಿಯಮ ಮೀರಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಪ್ರತಿಭಟಿಸಿದರು.
ಕಾರಿಗೆ 50 ರೂ. ವಾಪಸ್ ಬಂದರೆ 75 ರೂ. ಮಿನಿ ಲಾರಿ, ಬಸ್‌ಗೆ ಒಂದು ಕಡೆಗೆ 80 ರೂ. ಎರಡು ಕಡೆಗೆ 120 ರೂ. ಬಸ್‌ಗಳಿಗೆ ಒಂದು ಕಡೆಗೆ 165 ರೂ. ಎರಡು ಕಡೆಗೆ 245 ರೂ. ಟ್ರಕ್, ಟ್ಯಾಂಕರ್‌ಗಳಿಗೆ ಒಂದು ಕಡೆಗೆ 180 ರೂ. ಎರಡು ಕಡೆಗೆ 270 ರೂ. ಕಂಟೇನರ್‌ಗಳಿಗೆ ಒಂದು ಕಡೆಗೆ 260 ರೂ. ಎರಡು ಕಡೆಗೆ 385 ರೂ. ನಿಗದಿ ಮಾಡಲಾಗಿದ್ದು ವಾಹನ ಸವಾರರಿಗೆ ಹೊರೆಯಾಗಲಿದೆ ಎಂದು ಪ್ರತಿಭಟನಾಕಾರರು ಸಿಟ್ಟು ಹೊರಹಾಕಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಟೋಲ್ ಸಂಗ್ರಹ ಸ್ಥಗಿತಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.