ಕೊಪ್ಪಳ: ಇಲ್ಲಿನ ಗಂಗಾವತಿ ನಗರದ ಗಾಂಧಿ ಸರ್ಕಲ್‌ನಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಪೊಲೀಸರು ಡಿಜೆ (DJ Music) ಬಂದ್ ಮಾಡಲು ಮುಂದಾದ ಮೇಲೆ ಯುವಕರು ಪ್ರತಿಭಟನೆಗೆ ಮುಂದಾಗಿದ್ದು, ಪೊಲೀಸರು (Koppala Police) ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.
ಛಲುವಾದಿ ಓಣಿಯ ಯುವಕ ಮಂಡಳಿಯವರು ಗಣೇಶ ವಿಸರ್ಜನೆ ಮೆರವಣಿಗೆ ಮಾಡಿಕೊಂಡು ಗಣೇಶ ವೃತ್ತದವರೆಗೂ ಆಗಮಿಸಿದ್ದಾರೆ. ಸಮಯ ರಾತ್ರಿ 2 ಗಂಟೆ ಆಗಿರುವ ಹಿನ್ನೆಲೆಯಲ್ಲಿ ಪೊಲೀಸರು ಡಿಜಿ ಬಂದ್ ಮಾಡಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಸುವಂತೆ ಸೂಚಿಸಿದ್ದಾರೆ. ಒಪ್ಪದ ಯುವಕರು ಡಿಜೆ ಹಾಕಿಕೊಂಡು ಡ್ಯಾನ್ಸ್ ಮಾಡಲು ಮುಂದಾಗಿದ್ದಾರೆ. ನಂತರ ಒತ್ತಾಯದ ಮೇಲೆ ಪೊಲೀಸರು ಡಿಜೆ ಬಂದ್ ಮಾಡಿಸಿದ್ದಾರೆ.
ನಂತರ ಪೊಲೀಸರು ಡಿಜೆ ಬಂದ್ ಮಾಡಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ʻದಲಿತರ ಗಣೇಶ ಹಬ್ಬ ಆಚರಣೆಗೆ ಪೊಲೀಸರಿಂದ ವಿರೋಧʼ ಎಂದು ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಮನವೊಲಿಸಲು ಮುಂದಾಗಿದ್ದರು. ಆದ್ರೂ ಪ್ರಯೋಜನವಾಗದ ಹಿನ್ನೆಲೆ ಲಘು ಲಾಠಿ ಪ್ರಹಾರ ನಡೆಸಿ, ಪ್ರತಿಭಟನೆ ಚದುರಿಸಿದರು.
ನಂತರ ಮತ್ತೆ ದಲಿತ ಯುವಕ ಸಂಘದವರು ಡಿಜೆ ಬಂದ್ ಮಾಡಲು ಬಿಡುವುದಿಲ್ಲ ಎಂದು ಘೋಷಣೆ ಕೂಗಿಕೊಂಡು, ಡಿಜೆ ಹಾಕುವವರೆಗೂ ಗಣೇಶ ವಿಸರ್ಜನೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಪೊಲೀಸ ಇಲಾಖೆಯ ಅಧಿಕಾರಿಗಳು ಯುವಕರ ಮನವೊಲಿಸಿ, ಡಿಜೆ ಬಂದ್ ಮಾಡಿ, ಗಣೇಶ ವಿಸರ್ಜನೆಗೆ ಕಳುಹಿಸಲಾಯಿತು. ಸ್ಥಳದಲ್ಲಿಯೇ ಎಸ್ಪಿ, ಡಿವೈಎಸ್ಪಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.