ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಡಿಯರ್ ಕಾಮ್ರೆಡ್’ ಚಿತ್ರ ಬಿಡುಗಡೆ ವಿರೋಧಿಸಿ ಸಿಲಿಕಾನ್ ಸಿಟಿಯಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕೆಜಿ ರಸ್ತೆಯ ಮೇನಕಾ ಚಿತ್ರಮಂದಿರ ಬಳಿ ಕನ್ನಡ ಹೋರಾಟಗಾರರು ‘ಡಿಯರ್ ಕಾಮ್ರೆಡ್’ ಪ್ರದರ್ಶನವನ್ನು ನಿಲ್ಲಿಸಿ ಎಂದು ಪ್ರತಿಭಟನೆ ಮಾಡೆಸಿದ್ದಾರೆ. ಕನ್ನಡ ಹೋರಾಟಗಾರ ನಾಗೇಶ್ ಕುಮಾರ್ ನೇತೃತ್ವದಲ್ಲಿ ಮೇನಕಾ ಚಿತ್ರಮಂದಿರದ ಮುಂದೆ ರಶ್ಮಿಕಾ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ರಶ್ಮಿಕಾ ಮಂದಣ್ಣ ‘ಕನ್ನಡ ಮಾತನಾಡೋದು ಕಷ್ಟ’ ಎಂದು ತಮಿಳಿನ ಖಾಸಗಿ ವಾಹಿನಿಯ ಸಂದರ್ಶದಲ್ಲಿ ಹೇಳಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದವರಾಗಿ ಕನ್ನಡ ಮಾತನಾಡೋದು ಕಷ್ಟ ಎನ್ನುವ ನಟಿ ನಮಗೆ ಬೇಡ, ರಶ್ಮಿಕಾ ನಟಿಸಿರುವ ಚಿತ್ರಗಳು ರಾಜ್ಯದಲ್ಲಿ ಪ್ರದರ್ಶನ ಕಾಣಬಾರದು ಎಂದು ಘೋಷಣೆ ಕೂಗುತ್ತ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಚಿತ್ರರಂಗದಲ್ಲಿ ಬೆಳೆಯಲು ರಶ್ಮಿಕಾ ಅವರಿಗೆ ಕನ್ನಡ ಬೇಕಿತ್ತು. ಆದ್ರೆ ಈಗ ಬೇಡವಾಗಿದೆ. ರಶ್ಮಿಕಾ ಅವರು ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳನ್ನು ಮಾಡಿ, ಕರ್ನಾಟಕದವರಾಗಿ ಕನ್ನಡ ಮಾತಾಡೋದು ಕಷ್ಟ ಎಂದಿದ್ದಾರೆ. ಅವರ ಚಿತ್ರ ಬಿಡುಗಡೆ ರಾಜ್ಯದಲ್ಲಿ ಆಗಬಾರದು ಎಂದು ನಾವು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ತೆಲುಗು ಭಾಷೆಯಲ್ಲಿ ತೆರೆಕಂಡಿರುವ ಡಿಯರ್ ಕಾಮ್ರೆಡ್ ಸಿನಿಮಾ ಪ್ರದರ್ಶನ ನಡೆಯುತ್ತಿದೆ. ಆದರೆ ಕನ್ನಡ ಭಾಷೆಯಲ್ಲಿರುವ ಇದೇ ಚಿತ್ರ ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರ ಹಂಚಿಕೆಯಲ್ಲೂ ಕನ್ನಡಕ್ಕೆ ಅನ್ಯಾಯವಾಗಿದೆ ಎಂದು ಕಿಡಿಕಾರಿದ್ದಾರೆ.
Advertisement
Advertisement
ರಶ್ಮಿಕಾರನ್ನು ರಾಜ್ಯದಿಂದ ಹೊರಹಾಕಿ. ಇಂತಹ ನಟಿಯರಿಗೆ ಅವಕಾಶ ಕೊಟ್ಟು ನಿರ್ಮಾಪಕರು ಕನ್ನಡಕ್ಕೆ ಮೋಸ ದ್ರೋಹ ಮಾಡಬೇಡಿ. ಅವರು ಬೇರೆ ಬೇರೆ ಭಾಷಯಲ್ಲಿ ಚಿತ್ರ ಮಾಡಲಿ ಪರವಾಗಿಲ್ಲ, ಆದರೆ ಕನ್ನಡಕ್ಕೆ ಅವರ ಅವಶ್ಯಕತೆ ಇಲ್ಲ. ನಮಗೆ ಇಂತಹ ನಟಿಯರು ಬೇಡ. ಅವರು ನಮ್ಮ ಮೇಲೆ ಕೇಸ್ ಹಾಕಿದರೂ ನಾವು ಹೆದರಲ್ಲ. ತಾಖತ್ ಇದ್ದರೆ ಕರ್ನಾಟಕದಲ್ಲಿ ರಶ್ಮಿಕಾ ಚಿತ್ರ ಬಿಡುಗಡೆ ಮಾಡಿ ತೋರಿಸಲಿ. ನಾವು ಅವರ ಚಿತ್ರ ಬಿಡುಗಡೆಯಾಗದಂತೆ ಹೋರಾಟ ಮಾಡುತ್ತೇವೆ. ಮೇನಕಾ ಚಿತ್ರಮಂದಿರದಿಂದ ಈ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿಯೇ ನಾವು ಇಲ್ಲಿಂದೆ ಹೋಗೋದು ಎಂದು ಪ್ರತಿಭಟನಾಕಾರರು ಹರಿಹಾಯ್ದಿದ್ದಾರೆ. ಜೊತೆಗೆ ರಶ್ಮಿಕಾ ಅವರ ವ್ಯಂಗ್ಯ ಚಿತ್ರಗಳ ಪೋಸ್ಟರ್ ಹಿಡಿದು ಘೋಷಣೆ ಕೂಗಿದ್ದಾರೆ.