ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ (Harihara Panchamasali Peetha) ಸ್ವಾಮೀಜಿ ಪರ ಭಕ್ತರು ಹಾಗೂ ಟ್ರಸ್ಟಿಗಳ ನಡುವಿನ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಲಿಂಗೈಕ್ಯ ಡಾ ಮಹಾಂತ ಸ್ವಾಮೀಜಿ 89ನೇ ಜಯಂತೋತ್ಸವ ಕಾರ್ಯಕ್ರಮದಲ್ಲೇ ಟ್ರಸ್ಟಿಗಳ ವಿರುದ್ದ ಹೋರಾಟಕ್ಕೆ ಭಕ್ತರು ಮುಂದಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ನಿಷೇಧಾಜ್ಞೆ ಮುಂದುವರಿಸಿ ಆದೇಶ ಹೊರಡಿಸಿದ್ದಾರೆ.
ಲೆಕ್ಕ ಕೊಡಿ ಅಭಿಯಾನ ಸಮಿತಿ, ಟ್ರಸ್ಟಿಗಳ ವಿರುದ್ಧ ಮತ್ತೆ ಹೋರಾಟಕ್ಕೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಆದೇಶ ಹೊರಡಿಸಲಾಗಿದೆ. ಯಾವುದೇ ಸಭೆ , ಸಮಾರಂಭ , ಸುದ್ದಿಗೋಷ್ಠಿ ನಡೆಸದಂತೆ ಸೂಚನೆ ನೀಡಲಾಗಿದೆ. ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ವಚನಾನಂದ ಶ್ರೀಗಳು (Vachanananda Swamiji) ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದ್ದಾರೆ. ಇದನ್ನೂ ಓದಿ: ಹರಿಹರ ಪಂಚಮಸಾಲಿ ಗುರುಪೀಠದಲ್ಲಿ ಭಾರಿ ಹೈಡ್ರಾಮಾ – ಚಪ್ಪಲಿ, ಬಾಟೆಲ್ ತೂರಾಟ, ಕರೆಂಟ್ ಕಟ್
ಇತ್ತೀಚೆಗೆ ಹಾವೇರಿಯಲ್ಲಿ ಸಭೆ ಮಾಡಿದ್ದ ಟ್ರಸ್ಟ್ನವರು, ವಚನಾನಂದ ಸ್ವಾಮೀಜಿಗಳನ್ನ ಮಠದಿಂದ ತೆಗೆದುಹಾಕುವುದಾಗಿ ಹೇಳಿದ್ದರು. ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಸ್ವಾಮೀಜಿ ಬೆಂಬಲಿಗರು ಇಂದು ಚರ್ಚೆ ಮಾಡಲು ಮುಂದಾಗಿದ್ದರು. ಟ್ರಸ್ಟಿಗಳನ್ನು ವಜಾಗೊಳಿಸಿ ನೂತನ ಟ್ರಸ್ಟಿಗಳ ಆಯ್ಕೆ ಮಾಡಲು ನಿರ್ಧಾರ ಮಾಡಿದ್ದರು.
ಪ್ರಾಣವನ್ನಾದರೂ ಕೊಟ್ಟು ವಚನಾನಂದ ಸ್ವಾಮೀಜಿಗಳನ್ನು ಮಠದಲ್ಲಿ ಉಳಿಸಿಕೊಳ್ಳುತ್ತೇವೆ ಎಂದು ಭಕ್ತರು ಪ್ರತಿಜ್ಞೆ ಮಾಡಿದ್ದಾರೆ. ಇಂತಹ ಶ್ರೇಷ್ಠ ಗುರುಗಳನ್ನೇ ಮಠದಿಂದ ಹೊರ ಹಾಕುವ ಮಾತಾಡುವುದು ಸರಿಯಲ್ಲ ಎಂದು ಟ್ರಸ್ಟ್ ವಿರುದ್ದ ಭಕ್ತರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹರಿಹರ ಪಂಚಮಸಾಲಿ ಪೀಠದಲ್ಲಿ ಭಾರೀ ಹೈಡ್ರಾಮಾ – ಸ್ವಾಮೀಜಿ ಬೆಂಬಲಿಗರಿಂದ ಟ್ರಸ್ಟಿ ಬೆಂಬಲಿಗರ ಮೇಲೆ ಹಲ್ಲೆ

