ಮೈಸೂರು: ರಾಮಾಯಣದಲ್ಲಿ ವಾಲ್ಮೀಕಿ ರಾಮನನ್ನು ಎಲ್ಲೂ ದೇವರು ಎಂದಿಲ್ಲ. ನಮ್ಮ ದೇಶದಲ್ಲಿ ಈಗ ರಾಮನ ದೇವಸ್ಥಾನಗಳನ್ನು ಕಟ್ಟಲು ಮುಂದಾಗುತ್ತಿದ್ದಾರೆ. ದೇವಸ್ಥಾನ ಕಟ್ಟುವ ಮೊದಲು ರಾಮನ ಬಗ್ಗೆ ಗಮನಿಸಬೇಕು ಎಂದು ಸಾಹಿತಿ ಪ್ರೋ ಕೆಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಜಗನ್ಮೋಹಕ ಅರಮನೆಯಲ್ಲಿ ಆಯೋಜಿಸಿದ್ದ ವಿಶಿಷ್ಟ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಭಗವಾನ್, ರಾಮಾಯಣದಲ್ಲಿ ವಾಲ್ಮೀಕಿ ರಾಮನನ್ನು ಎಲ್ಲೂ ದೇವರೆಂದಿಲ್ಲ. ಯಾರದ್ದೋ ಮಾತು ಕೇಳಿ ಸೀತೆಯನ್ನು ರಾಮ ಕಾಡಿಗೆ ಕಳುಹಿಸಿದ ಹಾಗೂ ಬ್ರಾಹ್ಮಣರ ಮಾತು ಕೇಳಿ ಶಂಭುಕ ತಲೆ ಕತ್ತರಿಸಿದ. ಇಂತವನನ್ನು ದೇವರು ಎಂದು ಹೇಗೆ ಕರೆಯಬೇಕು. ಈ ಅಂಶಗಳನ್ನು ನಮ್ಮ ದೇಶದಲ್ಲಿ ದೇವಸ್ಥಾನ ಕಟ್ಟಲು ಮುಂದಾಗುತ್ತಿರುವವರು ಗಮನದಲ್ಲಿಟ್ಟು ಕೊಳ್ಳಬೇಕು ಎಂದರು.
Advertisement
ರಾಮಾಯಣದ ಪ್ರಮುಖ ಅಂಶಗಳು ಸಂಸ್ಕೃತದಲ್ಲಿ ಬಿಟ್ಟರೆ ಬೇರೆ ಎಲ್ಲೂ ಕೂಡ ಇಲ್ಲ. ಆದ್ದರಿಂದ ರಾಮನ ಬಗೆಗಿನ ಕೆಲ ಅಂಶಗಳು ಯಾರಿಗೂ ತಿಳಿದಿಲ್ಲ. ರಾಮ 11 ಸಾವಿರ ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಾನೆ ಎಂದು ಎಲ್ಲರೂ ಹೇಳುತ್ತಾರೆ. ಮನುಷ್ಯನಿಗೆ ಇರುವುದು ಕೇವಲ 100 ವರ್ಷಗಳು, ಹೀಗಿರುವಾಗ ರಾಮ ಹೇಗೆ ಅಷ್ಟು ವರ್ಷಗಳ ಕಾಲ ರಾಜ್ಯಭಾರ ಮಾಡಲು ಸಾಧ್ಯ. ಸಂಸ್ಕೃತದಲ್ಲಿ ವರ್ಷ ಎಂದರೆ ದಿನ ಎಂದರ್ಥ ಹೀಗಾಗಿ ರಾಮ ಕೇವಲ 11 ವರ್ಷ ಮಾತ್ರ ರಾಜ್ಯಭಾರ ಮಾಡಿದ್ದಾನೆ ಎಂದು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Advertisement
Advertisement