ಮಿಲಿಂದ್ ಗೌತಮ್ (Milind Gautham) ನಾಯಕನಾಗಿ ನಟಿಸಿರುವ ‘ಅನ್ ಲಾಕ್ ರಾಘವ’ ಚಿತ್ರ ಫೆಬ್ರವರಿ 7ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ. ಕಾಮಿಡಿ ಕಮ್ ಆಕ್ಷನ್ ಬಗೆಯ ಈ ಸಿನಿಮಾ ಈಗಾಗಲೇ ಟ್ರೈಲರ್ ಸೇರಿದಂತೆ ಒಂದಷ್ಟು ವಿಚಾರಗಳಿಂದಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇದರೊಂದಿಗೆ ವರ್ಷಾರಂಭದ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿಯೂ ಸ್ಥಾನ ಪಡೆದುಕೊಂಡಿದೆ. ಹೊಸತನದೊಂದಿಗೆ ಪ್ರೇಕ್ಷಕರಲ್ಲೊಂದು ಬೆರಗು ಮೂಡಿಸಬೇಕೆಂಬ ತುಡಿತ ಹೊಂದಿರೋ ಅಪ್ಪಟ ಸಿನಿಮಾ ಮೋಹಿಗಳ ತಂಡ ಅನ್ ಲಾಕ್ ರಾಘವನ ಹಿಂದಿದೆ. ಅದೆಲ್ಲದರ ಪ್ರೇರಕ ಶಕ್ತಿಯಂತಿರುವವರು ಈ ಸಿನಿಮಾದ ನಿರ್ಮಾಪಕ ಮಂಜುನಾಥ್ ದಾಸೇಗೌಡ.
ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ದಾಸೇಗೌಡ (Manjunath Dasegowda) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಐಪ್ಲೆಕ್ಸ್ ಬ್ಯಾನರ್ ಮೂಲಕ ಗಿರೀಶ್ ಕುಮಾರ್ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ದೃಶ್ಯರೂಪ ಪಡೆಯೋ ಮುಂಚಿನ ವಿದ್ಯಮಾನಗಳು ಆಸಕ್ತಿಕರವಾಗಿರುತ್ತವೆ. ಆ ಹಾದಿಯಲ್ಲಿ ತೀವ್ರವಾದ ಕನಸು, ಹುಮ್ಮಸ್ಸುಗಳ ಒಡ್ಡೋಲಗವೂ ಇರುತ್ತದೆ. ಅದಾಗಲೇ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿ, ಮತ್ತೊಂದು ಸಿನಿಮಾದತ್ತ ಹೊರಳಿಕೊಂಡಿದ್ದ ಮಂಜುನಾಥ್ ಅವರ ಪಾಲಿನ ನಾಲಕ್ಕನೇ ಚಿತ್ರ ಅನ್ ಲಾಕ್ ರಾಘವ. ಮಂಜುನಾಥ್ ನಿರ್ದೇಶಕ ಸತ್ಯಪ್ರಕಾಶ್ ಸಿದ್ಧಪಡಿಸಿದ್ದ ಕಥೆ ಕೇಳಿ ಆರಂಭಿಕವಾಗಿಯೇ ಫಿದಾ ಆಗಿದ್ದರು. ಆರಂಭದಲ್ಲಿ ಈ ಕಥೆ ಸ್ಟಾರ್ ನಟರೊಬ್ಬರಿಗೆಂದೇ ರೆಡಿಯಾಗಿತ್ತು.
ಆದರೆ, ಆ ಸ್ಟಾರ್ ನಟರ ಕಾಲ್ ಶೀಟ್ ಎರಡು ವರ್ಷದೊಳಗೆ ಸಿಗಲಾರದೆಂಬ ವಿಚಾರ ಮಂಜುನಾಥ್ ದಾಸೇಗೌಡ ಹಾಗೂ ನಿರ್ದೇಶಕ ದೀಪಕ್ ಪಾಲಿಗೆ ಕೊಂಚ ನಿರಾಸೆ ಮೂಡಿಸಿದ್ದದ್ದು ನಿಜ. ಆದರೆ, ಅಷ್ಟು ದೀರ್ಘಾವಧಿಯ ಕಾಲ ಕಾದು ಫ್ರೆಶ್ ಆದ ಕಥೆಯನ್ನು ಮುಗ್ಗಲು ಹಿಡಿಸಲು ಅವರು ತಯಾರಿರಲಿಲ್ಲ. ಆದರೆ, ತಕ್ಷಣವೇ ಸಿನಿಮಾ ಶುರುವಾಗಬೇಕೆಂಬ ನಿರ್ಧಾರಕ್ಕೆ ಬಂದಾಗ ಹೀರೋ ಯಾರೆಂಬ ಪ್ರಶ್ನೆ ಕಾಡಿತ್ತು. ಆಗ ಎಲ್ಲ ರೀತಿಯಿಂದಲೂ ತಯಾರಾಗಿ ನಿಂತಿದ್ದ ಹುಡುಗ ಮಿಲಿಂದ್ ಗೌತಮ್ ಸೂಕ್ತ ಎಂಬ ನಿರ್ಧಾರಕ್ಕೆ ನಿರ್ಮಾಪಕರು ಮತ್ತು ನಿರ್ದೇಶಕರು ಬಂದಿದ್ದರು. ಅದಾದ ಕೂಡಲೇ ‘ಅನ್ ಲಾಕ್ ರಾಘವ’ನಿಗೆ ವಿದ್ಯುಕ್ತ ಚಾಲನೆ ಸಿಕ್ಕಿತ್ತು. ಇದನ್ನೂ ಓದಿ:ಸುದೀಪ್ ಅಳಿಯ ಸಂಚಿತ್ ಚೊಚ್ಚಲ ಚಿತ್ರದ ಟೈಟಲ್ ರಿವೀಲ್
ಶಿವಮೊಗ್ಗ ಮೂಲದವರಾದ ಮಂಜುನಾಥ್ ದಾಸೇಗೌಡ ಬೆಂಗಳೂರಿನಲ್ಲಿ ಬ್ಯುಸಿನೆಸ್ ನಡೆಸುತ್ತಿರುವವರು. ವ್ಯವಹಾರದ ನಡುವಲ್ಲಿಯೇ ಸಿನಿಮಾ ವ್ಯಾಮೋಹ ಹೊಂದಿದ್ದ ಅವರಿಗೆ ಒಂದಷ್ಟು ಸಿನಿಮಾ ಜಗತ್ತಿನ ಮಂದಿಯ ಪರಿಚಯವಿತ್ತು. ಈ ನಡುವೆ ಹಿರಿಯ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಉದ್ಘರ್ಷ ಎಂಬ ಕಥೆ ರೆಡಿ ಮಾಡಿಕೊಂಡಿದ್ದರು. ಅದನ್ನು ನಿರ್ಮಾಣ ಮಾಡುವಂತೆ ಮಂಜುನಾಥ್‌ರನ್ನು ಉತ್ತೇಜಿಸಿದ್ದರು. ಅವರ ಒತ್ತಾಸೆಯಿಂದಾಗಿ ಉದ್ಘರ್ಷ ಚಿತ್ರವನ್ನು ನಿರ್ಮಾಣ ಮಾಡಿದ್ದ ಮಂಜುನಾಥ್ ಅವರ ಪಾಲಿಗೆ ಅಗಾಧ ಅನುಉಭವ ದಕ್ಕಿತ್ತು. ಅದಾದ ಬಳಿಕ ವೀಕೆಂಡ್, ಮ್ಯಾನ್ ಆಫ್ ದ ಮ್ಯಾಚ್ ಎಂಬೆರಡು ಸಿನಿಮಾಗಳನ್ನೂ ನಿರ್ಮಾಣ ಮಾಡಿದ್ದರು.
4ನೇ ಚಿತ್ರವನ್ನು ಸ್ಟಾರ್ ನಟನನ್ನು ಹಾಕಿಕೊಂಡು ಮಾಡಬೇಕೆಂಬ ಇರಾದೆ ಮಂಜುನಾಥ್, ಗಿರೀಶ್ ಮತ್ತು ನಿರ್ದೇಶಕರ ದೀಪಕ್ ಅವರಿಗಿತ್ತಂತೆ. ಅದು ಸಾಧ್ಯವಾಗದಿದ್ದರೂ ನಿರಾಸೆಗೊಳ್ಳದೆ ಅದೇ ಸ್ಕ್ರಿಪ್ಟ್ ಅನ್ನಿಟ್ಟುಕೊಂಡು, ಹೊಸಾ ಹುಡುಗ ಮಿಲಿಂದ್ ಗೌತಮ್‌ರನ್ನು ಹೀರೋ ಆಗಿಸಿದ್ದಾರೆ. ನಟನೆ ಸೇರಿದಂತೆ ಎಲ್ಲದ್ರಲ್ಲಿಯೂ ಪಳಗಿಕೊಂಡಿದ್ದ ಮಿಲಿಂದ್ ಆ ಪಾತ್ರವನ್ನು ಚೆಂದಗೆ ನಿಭಾಯಿಸಿದ್ದಾರೆ. ನಿರ್ದೇಶಕರು ಊಹೆಯನ್ನೂ ಮೀರಿ ಈ ಚಿತ್ರವನ್ನು ರೂಪಿಸಿದ್ದಾರೆಂಬ ತುಂಬು ಮೆಚ್ಚುಗೆ ಮಂಜುನಾಥ್ ದಾಸೇಗೌಡರಲ್ಲಿದೆ.
ಈಗಾಗಲೇ ಟ್ರೈಲರ್ ನೋಡಿದ ಮಂದಿ ಥ್ರಿಲ್ ಆಗಿದ್ದಾರೆ. ಅದರ ಬೆನ್ನಲ್ಲಿಯೇ ಸೆನ್ಸಾರ್ ಅಧಿಕಾರಿಗಳು ಆಡಿರುವ ಮೆಚ್ಚುಗೆಯ ಮಾತುಗಳು ಅವರೊಳಗಿನ ಭರವಸೆಯನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಕಾಮಿಡಿ, ಆಕ್ಷನ್, ಲವ್ ಜೊತೆಗೆ ಕಮರ್ಶಿಯಲ್ ಅಂಶಗಳೊಂದಿಗೆ ಮೂಡಿ ಬಂದಿರೋ ಅನ್ ಲಾಕ್ ರಾಘವ ವಿಭಿನ್ನ ಕಥೆಯನ್ನೊಳಗೊಂಡಿದೆ. ಅದು ಖಂಡಿತಾ ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ತುಂಬು ನಂಬಿಕೆ ಮಂಜುನಾಥ್ ದಾಸೇಗೌಡರಲ್ಲಿದೆ. ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಶೋಭರಾಜ್, ಸಾಧು ಕೋಕಿಲಾ, ಕಡೂರು ಧರ್ಮಣ್ಣ, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಸುಂದರ್, ವೀಣಾ ಸುಂದರ್ ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ. ರೆಚೆಲ್ ನಾಯಕಿಯಾಗಿ ಮಿಲಿಂದ್ ಅವರಿಗೆ ಸಾಥ್ ಕೊಟ್ಟಿದ್ದಾರೆ. ಲವಿತ್ ಛಾಯಾಗ್ರಹಣ, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ನಿರ್ದೇಶನ, ಅನೂಪ್ ಸಿಳೀನ್ ಸಂಗೀತ, ಅಜಯ್ ಮತ್ತು ಮಧು ತುಂಬಕೆರೆ ಸಂಕಲನ ಈ ಚಿತ್ರಕ್ಕಿದೆ.