-ಬೆಂಕಿಯಲ್ಲಿ ಫೈಟ್ ಮಾಡಿದ ಶ್ರೇಯಸ್!
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಕೆ.ಮಂಜು ತಮ್ಮ ಮಗ ಶ್ರೇಯಸ್‍ನನ್ನು ಚಂದನವನಕ್ಕೆ ಭರ್ಜರಿಯಾಗಿ ಪರಿಚಯಿಸಲು ಹೊರಟಿದ್ದಾರೆ. ನಿರ್ದೇಶನದ ಹೊಣೆಯನ್ನು ರಾಜಾಹುಲಿ ಖ್ಯಾತಿಯ ಗುರು ದೇಶಪಾಂಡೆಯವರಿಗೆ ವಹಿಸಿದ್ದು, ಚಿತ್ರಕ್ಕೆ ‘ಪಡ್ಡೆಹುಲಿ’ ಎಂದು ಶೀರ್ಷಿಕೆ ಇಡಲಾಗಿದೆ. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಕನ್ನಡ ಭಾಷೆಯಲ್ಲಿ ಒಬ್ಬ ನಾಯಕನನ್ನು ಪರಿಚಯಿಸಲು 45 ರಿಂದ 50 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಪ್ರೋಮೊ ಶೂಟ್ ಮಾಡಲಾಗಿದೆ.
ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ಎಂ.ರಮೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರ ತಂಡವು ಶ್ರೇಯಸ್‍ನನ್ನು ಪರಿಚಯಿಸಲು ಅದ್ಧೂರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 6 ಅದ್ಭುತವಾದ ಸೆಟ್‍ಗಳಲ್ಲಿ ಶೂಟ್ ಮಾಡಿದ್ದಾರೆ. ಉರಿಯುತ್ತಿರುವ ಬೆಂಕಿಯಲ್ಲಿ ಯಾವುದೇ ಡ್ಯೂಪ್ ಸಹಾಯವಿಲ್ಲದೆ ರಿಸ್ಕ್ ತೆಗೆದುಕೊಂಡು ಬೈಕ್ ಓಡಿಸುವ ರೋಚಕ ಮತ್ತು ಮೈ ನವಿರೇಳಿಸುವ ವಿವಿಧ ಸಾಹಸಗಳನ್ನು ಸ್ವತಃ ಶ್ರೇಯಸ್ ಲೀಲಾಜಾಲವಾಗಿ ಮಾಡಿದ್ದಾರೆ. ಅತೀ ಶೀಘ್ರದಲ್ಲಿ ಮುಹೂರ್ತ ಮಾಡಿ ಪ್ರೋಮೊ ಬಿಡುಗಡೆಗೊಳಿಸಿ, ಮಾರ್ಚ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭಿಸಲು ಎಲ್ಲಾ ಸಿದ್ಧತೆಗಳನ್ನು ನಿರ್ದೇಶಕ ಗುರು ದೇಶಪಾಂಡೆ ಮಾಡಿಕೊಂಡಿದ್ದಾರೆ.
ಕೆ. ಮಂಜು ಅಂದರೇನೇ ಕನ್ನಡ ಚಿತ್ರರಂಗದ ವರ್ಣರಂಜಿತ ಹೆಸರು. ಸುಮಾರು ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ಮಂಜು ಗಂಡುಗಲಿ ನಿರ್ಮಾಪಕ ಎಂದೇ ಹೆಸರು ಮಾಡಿದವರು. ಬಹುಕೋಟಿ ವೆಚ್ಚದ ಸಿನಿಮಾಗಳನ್ನು ಹಿಂದೂ ಮುಂದೂ ನೋಡದೆ ನಿರ್ಮಿಸಿದವರು. ಲೆಕ್ಕವಿಲ್ಲದಷ್ಟು ಕಳೆದುಕೊಂಡರೂ ಮತ್ತೆ ಮತ್ತೆ ಸಿನಿಮಾಗಳನ್ನು ನಿರ್ಮಿಸಿ ಲಾಭವನ್ನೂ ಕಂಡವರು. ಇಂತ ಮಂಜು ಅವರ ಮಗನ ಸಿನಿಮಾ ಎಷ್ಟರ ಮಟ್ಟಿಗೆ ಅದ್ದೂರಿಯಾಗಿರುತ್ತದೆ ಅನ್ನೋದು ಗಾಂಧಿನಗರದವರ ಸಹಜ ಕುತೂಹಲ. ಈಗ ಆರಂಭದಲ್ಲೇ ಸಿನಿಮಾ ಸದ್ದು ಮಾಡುತ್ತಿರೋದು ನೋಡಿದರೆ ನಿರ್ದೇಶಕ ಗುರು ದೇಶಪಾಂಡೆ ಶ್ರೇಯಸ್‍ನನ್ನು ಮೊದಲ ಸಿನಿಮಾದಲ್ಲೇ ಪಕ್ಕಾ ಕಮರ್ಷಿಯಲ್ ಹೀರೋ ಮಾಡಿಸೋದು ಗ್ಯಾರೆಂಟಿ ಎನಿಸುತ್ತಿದೆ.