ನವದೆಹಲಿ: ಜಾರಿ ನಿರ್ದೇಶನಾಲಯ (Enforcement Directorate) ತಂಡ ದಾಳಿ ನಡೆಸಿದ್ದ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ನಡೆದ ಘಟನೆ ದೆಹಲಿಯ (Delhi) ಬಿಜ್ವಾಸನ್ ಪ್ರದೇಶದಲ್ಲಿ ನಡೆದಿದೆ.
ಏಜೆನ್ಸಿಯ ಹೈ-ಇಂಟೆನ್ಸಿಟಿ ಯೂನಿಟ್ (HIU) ನ ಭಾಗವಾಗಿರುವ ED ತಂಡವು ಸೈಬರ್ ಅಪ್ಲಿಕೇಶನ್ ವಂಚನೆ (Cyber Fraud Case) ಪ್ರಕರಣದ ತನಿಖೆಗೆ ಸಂಬಂಧಿಸಿದ ಶೋಧಕ್ಕೆ ತೆರಳಿತ್ತು. ಈ ವೇಳೆ ಅಶೋಕ್ ಶರ್ಮಾ ಮತ್ತು ಆತನ ಸಹೋದರ ಹಾಗೂ ಕುಟುಂಬದ ಸದಸ್ಯರು ಸೇರಿಕೊಂಡು ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಇಡಿ ಸಹಾಯಕ ನಿರ್ದೇಶಕರಿಗೆ ಗಾಯಗಳಾಗಿವೆ.
ಗಲಾಟೆ ಹೆಚ್ಚಾಗುತ್ತಿದ್ದಂತೆ ಸ್ಥಳೀಯ ಪೊಲೀಸರನ್ನು ತಕ್ಷಣವೇ ಸ್ಥಳಕ್ಕೆ ಕರೆಸಲಾಗಿದೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಬೃಹತ್ ಸೈಬರ್ ಕ್ರೈಮ್ ನೆಟ್‌ವರ್ಕ್‌ಗೆ ಸಂಬಂಧಿಸಿರುವ ಉನ್ನತ ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ಗುರಿಯಾಗಿಟ್ಟುಕೊಂಡು ಜಾರಿ ನಿರ್ದೇಶನಾಲಯದ ಹೈ-ಇಂಟೆನ್ಸಿಟಿ ಯುನಿಟ್ (ಹೆಚ್‌ಐಯು) ಇಂದು ವ್ಯಾಪಕ ದಾಳಿ ಪ್ರಾರಂಭಿಸಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಈ ದಾಳಿಗಳು ಫಿಶಿಂಗ್ ಹಗರಣ, ಕ್ಯೂಆರ್ ಕೋಡ್ ವಂಚನೆ ಮತ್ತು ಅರೆಕಾಲಿಕ ಉದ್ಯೋಗ ಹಗರಣ ಹಾಗೂ ಸಾವಿರಾರು ಸೈಬರ್ ಅಪರಾಧಗಳು ಸೇರಿದಂತೆ ಅಕ್ರಮ ಮನಿ ಲಾಂಡರಿಂಗ್ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದೆ.