ಬೆಂಗಳೂರು: ಪ್ರಿಯಾಂಕಾ ಉಪೇಂದ್ರ ವಿಭಿನ್ನ ಪಾತ್ರಗಳ ಚಿತ್ರಗಳು ಬಂದರೆ ಕೈ ಬಿಡುವುದಿಲ್ಲ. ಅದು ಅತಿಥಿ ಪಾತ್ರವೇ ಆಗಿರಲಿ ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ. ಕಥೆಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ಬೆಂಗಾಲಿ ಬೆಡಗಿ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಹಾಗೂ ನಟನೆ ಮೂಲಕ ಕನ್ನಡಿಗರ ಮನಸ್ಸು ಕದ್ದಿದ್ದಾರೆ. ಮದುವೆ ನಂತರವೂ ಪ್ರಿಯಾಂಕಾ ಉಪೇಂದ್ರ ನಟನೆಯಲ್ಲಿ ತೊಡಗಿದ್ದು, ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಎಚ್2ಓ ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ಪ್ರಿಯಾಂಕಾ, ಇದೇ ಸಮಯದಲ್ಲಿ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ವಿಷ್ಣುವರ್ಧನ್ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಉಪ್ಪಿ-2, ಪ್ರಿಯಾಂಕಾ, ಮಮ್ಮಿ, ದೇವಕಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಲಾಕ್ಡೌನ್ ಹೊತ್ತಲ್ಲಿ ಚಿತ್ರದ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾರೆ.
ಹೌದು ‘ಸೇಂಟ್ ಮಾರ್ಕ್ಸ್ ರೋಡ್’ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸುತ್ತಿದ್ದು, ಈ ಸಿನಿಮಾ ಕನ್ನಡ ಹಾಗೂ ತಮಿಳು ಎರಡು ಭಾಷೆಗಳಲ್ಲಿ ತಯಾರಾಗುತ್ತಿದೆ. ಇನ್ನೂ ವಿಶೇಷವೆಂದರೆ ಪ್ರಿಯಾಂಕಾ ಉಪೇಂದ್ರ ಈ ಚಿತ್ರದಲ್ಲಿ ದ್ವಿಪಾತ್ರ ನಿರ್ವಹಿಸಿದ್ದು, ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚರ್ಚ್ ಬೀದಿಯಲ್ಲಿ ನಡೆಯುವ ನೈಜ ಘಟನೆಯನ್ನಾಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದ್ದು, ಮ್ಯಾಗ್ವೆನ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇದೊಂದು ಹಾರರ್ ಜಾನರ್ ಚಿತ್ರವಾಗಿದ್ದು, ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಡಬಲ್ ರೋಲ್ನಲ್ಲಿ ನಟಿಸುತ್ತಿದ್ದೇನೆ. ಕ್ರಿಶ್ಚಿಯನ್ ಅವಳಿ ಸೋದರಿಯರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಎರಡು ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿರುವುದರಿಂದ ಪಾತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕಿದೆ. ನಿರ್ದೇಶಕರು ಚಿತ್ರದ ಕಥೆ ರಚನೆಯಲ್ಲಿ ಬ್ಯುಸಿಯಾಗಿದ್ದು, ಲಾಕ್ಡೌನ್ ಅವಧಿ ಪೂರ್ಣಗೊಂಡ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ. ನನ್ನದು ವಿಶೇಷ ಪಾತ್ರವಾಗಿದ್ದರಿಂದ ಕುತೂಹಲ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಮಮ್ಮಿ ಸಿನಿಮಾದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ್ದ ಪ್ರಿಯಾಂಕಾ ಉಪೇಂದ್ರ ಇದೀಗ ‘ಸೇಂಟ್ ಮಾಕ್ರ್ಸ್ ರೋಡ್’ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಪ್ರಿಯಾಂಕಾ ಅವರಿಗೆ ಸಸ್ಪೆನ್ಸ್, ಹಾರರ್ ಹಾಗೂ ಥ್ರಿಲ್ಲರ್ ಸಿನಿಮಾಗಳೆಂದರೆ ಹೆಚ್ಚು ಇಷ್ಟವಂತೆ. ಅವರಿಷ್ಟದಂತೆ ಹಾರರ್ ಸಿನಿಮಾದಲ್ಲೇ ನಟಿಸುತ್ತಿದ್ದಾರೆ.