– ವಿಜಯೇಂದ್ರ ಪೂಜ್ಯ ಅಪ್ಪಾಜಿ ಮೇಲೂ ಇದೇ ತರಹ ಕೇಸ್ ಇದೆಯಲ್ಲ ಎಂದು ಟಾಂಗ್
ಕಲಬುರಗಿ: ಸಿ.ಟಿ ರವಿ (CT Ravi) ಸದನದ ಒಳಗಿಂದ ಜೀವಂತವಾಗಿ ಬಂದದ್ದೇ ಪುಣ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಲ್ಲ. ಬದಲಿಗೆ ರವಿ ಒಬ್ಬ ಹರಕು ಬಾಯಿ ಮನುಷ್ಯ ಎಂದಷ್ಟೇ ಹೇಳಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಮಜಾಯಿಷಿ ನೀಡಿದರು.
ಕಲಬುರಗಿಯಲ್ಲಿಂದು (Kalaburagi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮನೆಯ ಹೆಣ್ಣು ಮಕ್ಕಳ ಪೈಕಿ ಯಾರಿಗಾದರೂ ಆ ಪದ ಉಪಯೋಗಿಸಿದ್ದರೆ ಏನು ಮಾಡುತ್ತಿದ್ದಿರಿ? ಎಂದು ಪ್ರಶ್ನಿಸಿದ ಅವರು, ಇದನ್ನೇ ಉಲ್ಲೇಖಿಸಿ ಆತನೊಬ್ಬ ಹರಕು ಬಾಯಿ ಅಂತಷ್ಟೇ ಡಿಸಿಎಂ ಹೇಳಿದ್ದಾರೆ. ಒಬ್ಬ ಆರೋಪಿ ಸ್ಟೇಷನ್ ಒಳಗಿದ್ದರೆ ಅಲ್ಲಿ ಬಿಜೆಪಿಯವರಿಗೆ ಏನು ಕೆಲಸ? ಎಂದು ಸಹ ಪ್ರಶ್ನಿಸಿದರು.
- Advertisement
- Advertisement
ಸಿ.ಟಿ ರವಿ ಅವರನ್ನು ಇಡೀ ರಾತ್ರಿ ಸುತ್ತಾಡಿಸಿದ್ದು ಸರಿಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಟೈಟ್ ಮಾಡಿದ್ರೆ ಶಾಸಕನಿಗೆ ಹಿಂಗೆ ಮಾಡಿದ್ರು ಅಂತೀರಿ, ಫ್ರೀ ಬಿಟ್ರೆ ಐಷಾರಾಮಿ ವ್ಯವಸ್ಥೆ ಕೊಟ್ರಿ ಅಂತೀರಿ. ತಮ್ಮ ಮೊಬೈಲ್, ವಾಚು ಪೊಲೀಸರು ಕಿತ್ತುಕೊಂಡರು ಅಂತ ಸಿ.ಟಿ.ರವಿ ಹೇಳ್ತಾರೆ, ಒಬ್ಬ ಆರೋಪಿ ಸ್ಥಾನದಲ್ಲಿ ನಿಂತಾಗ ತಕ್ಷಣ ಬಾಡಿ ಸರ್ಚ್ ಆಗಬೇಕಲ್ಲವಾ? ದರ್ಶನ್ ಪ್ರಕರಣದಲ್ಲಿ ಮೊಬೈಲ್ ಮೂಲಕ ವಿಡಿಯೋ ಕರೆ ಬಂದಾಗ ನೀವೇ ಏನೆಲ್ಲಾ ಹೇಳಿದ್ದಿರಿ ಎಂದು ನೆನಪಿಸಿದರು.
ʻನಾವೂ ಬಳೆ ತೊಟ್ಟಿಲ್ಲ’ ಎನ್ನುವ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ನೀವು ಬಳೆ ತೊಟ್ಟಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ ಬಳೆ ತೊಟ್ಟವರ ಬಗ್ಗೆ ಹೀಗೆಲ್ಲಾ ಮಾತಾಡಿದ್ದೀರಲ್ಲ. ವಿಜಯೇಂದ್ರ ಒಳ್ಳೆಯ ನಾಯಕರಾಗಿದ್ದರೆ ಇದೆಲ್ಲವನ್ನೂ ಖಂಡಿಸಬೇಕಿತ್ತು. ಪೂಜ್ಯ ಅಪ್ಪಾಜಿ ಅವರ ಮೇಲೆ ಇಂಥದ್ದೇ ಕೇಸ್ ಇದೆಯಲ್ವಾ? ನಿಮ್ಮನೆಯೇ ಸರಿಪಡಿಸಿಕೊಳ್ಳಲು ಆಗಿಲ್ಲ. ಅಂಥದ್ದರಲ್ಲಿ ಬಳೆ ತೊಟ್ಟಿಲ್ಲ, ಸೀರೆ ಉಟ್ಟಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಹೇಳುವುದು ಎಷ್ಟು ಸರಿ? ಎಂದು ಕಿಡಿ ಕಾರಿದರು.
ಸಿ.ಟಿ. ರವಿ ಹಾಗೆ ಮಾತನಾಡಿದ್ದು ಸತ್ಯ ಆಗಿದ್ದಲ್ಲಿ ಕ್ರಮ ತಗೋತೀವಿ ಅಂದಿದ್ದರೆ ವಿಜಯೇಂದ್ರ ಒಳ್ಳೆಯ ನಾಯಕತ್ವ ಗುಣ ಇರುವ ರಾಜಕಾರಣಿ ಎಂದು ಗೌರವಿಸುತ್ತಿದ್ದೆವು. ಮೊದಲು ಪೂಜ್ಯ ಅಪ್ಪಾಜಿ, ನಿಮ್ಮ ಶಾಕಸರ ಬಗ್ಗೆ ಮಾತಾಡಿ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಂತಾರೆ. ಇನ್ನೂ 10 ವರ್ಷ ಕಳೆದರೂ ಅವರಿಗೆ ಆ ಕಾಲ ಬರಲ್ಲ. ಬಿಜೆಪಿಯಲ್ಲಿ ಬಣ ರಾಜಕೀಯವಿದೆ. ಅವರಲ್ಲಿ ಅತ್ತೆ ಯಾರು ಸೊಸೆ ಯಾರು ಎಂಬುದನ್ನು ಮೊದಲು ನಿರ್ಧಾರ ಮಾಡಿಕೊಳ್ಳಲಿ ಎಂದು ಸಲಹೆ ಕುಟುಕಿದರು.