– ಕೇಂದ್ರದಲ್ಲಿ ರಾಜ್ಯದ ಬಿಜೆಪಿ ಸಂಸದರಿಗೆ ನಯಾ ಪೈಸೆ ಕಿಮ್ಮತ್ತಿಲ್ಲ ಎಂದು ಸಚಿವ ಟೀಕೆ
ಬೆಂಗಳೂರು: ಬಿಜೆಪಿಯವ್ರು ಆರ್‌ಎಸ್‌ಎಸ್‌ನ ಗುಲಾಮರು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಒಂದು ತಿಂಗಳಿಂದ ಪಥಸಂಚಲನ ಜಟಾಪಟಿ ನಡೀತಿದೆ. ಒಂದು ತಿಂಗಳ ನಂತರ ನಿನ್ನೆ ಅದರ ಮುಖ್ಯಸ್ಥರು ಮಾತಾಡಿದ್ದಾರೆ. ಆದರೆ, ಬಿಜೆಪಿಯವ್ರು ಒಂದು ತಿಂಗಳಿಂದ ಬೀದಿಯಲ್ಲಿ ಮಾತಾಡ್ತಿದ್ದಾರೆ. ಆರ್‌ಎಸ್‌ಎಸ್ ಪರ ಮಾತಾಡದಿದ್ರೆ ಬಿಜೆಪಿ ನಾಯಕರಿಗೆ ಟಿಕೆಟ್ ಸಿಗಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಇನ್ನೂ ಆಗಿಲ್ಲ ಯಾಕೆ? ಆರ್‌ಎಸ್‌ಎಸ್ ಅನುಮತಿ ಕೊಟ್ಟಿಲ್ಲ ಎಂದು ಲೇವಡಿ ಮಾಡಿದರು.
ಆರ್‌ಎಸ್‌ಎಸ್ ಅನ್ನು ಇಡೀ ಸಮಾಜ ಒಪ್ಪಿಲ್ಲ, ಇಡೀ ದೇಶ ಒಪ್ಪಿಲ್ಲ. ಎಲ್ಲರೂ ಒಪ್ಪಿದ್ದಾರೆ ಅನ್ನೋ ಭಾವನೆ ಸರಿಯಲ್ಲ. ಸರ್ಕಾರಿ ಜಾಗಗಳಲ್ಲಿ ಚಟುವಟಿಕೆ ಮಾಡೋ ಹಾಗಿಲ್ಲ, ಅನುಮತಿ ತಗೋಬೇಕು. ನಾವು ಆರ್‌ಎಸ್‌ಎಸ್‌ನ ಆಳು ಮಕ್ಕಳು ಅಲ್ಲ. ದೊಡ್ಡ ಸಂಘಟನೆ ಅಂತಾರೆ, ಯಾಕೆ ಇನ್ನೂ ಆರ್‌ಎಸ್‌ಎಸ್ ನೋಂದಣಿ ಆಗಿಲ್ಲ? ಇವರಿಗೊಂದು ನ್ಯಾಯ ನಮಗೊಂದು ನ್ಯಾಯನಾ? ಪಥಸಂಚಲನ ಏನಕ್ಕೆ ಮಾಡಬೇಕು? ಅದರ ಅಗತ್ಯ ಏನು? ಪಥಸಂಚಲನ ಮಾಡಬೇಕಾದರೆ ಅನುಮತಿ ತಗೋಬೇಕಲ್ಲ? ನೋಂದಣಿ ಆಗದೇ ಹೇಗೆ ಅನುಮತಿ ಪಡೀತಾರೆ ಎಂದು ಪ್ರಶ್ನಿಸಿದರು.
ಖಾಸಗಿ ಜಾಗ, ನಿಮ್ಮವರ ಒಡೆತನದ ಜಾಗಗಳಲ್ಲಿ ಪಥಸಂಚಲನ ಮಾಡಿಕೊಳ್ಳಿ. ದೇಶ ಸಂಸ್ಕೃತಿ, ಐಕ್ಯತೆಗೆ ದುಡೀತಿದ್ರೆ ಇದೆಲ್ಲ ಅಗತ್ಯ ಏನು? ದೊಣ್ಣೆ ಹಿಡಿದುಕೊಂಡೇ ಪಥಸಂಚಲನ ಮಾಡಬೇಕು ಅನ್ನೋದೇನು? ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಿಗೆ ವೇತನ ಅಥವಾ ಗೌರವಧನ ಕೊಡ್ತಿದ್ದಾರಲ್ಲ, ಹೇಗೆ, ಎಲ್ಲಿಂದ ಕೊಡ್ತಿದ್ದಾರೆ? ಆರ್‌ಎಸ್‌ಎಸ್‌ನಲ್ಲಿ ಪಾರದರ್ಶಕತೆ ಯಾಕಿಲ್ಲ? ಯಾಕೆ ರಹಸ್ಯ ಕಾಪಾಡ್ತಾರೆ? ಆದಾಯ, ದೇಣಿಗೆ ಯಾರು ಕೊಡ್ತಾರೆ? ಎಲ್ಲಿಂದ ಬರುತ್ತೆ? ನಿತ್ಯದ ಖರ್ಚುಗಳನ್ನು ಆರ್‌ಎಸ್‌ಎಸ್ ಹೇಗೆ ನಿರ್ವಹಿಸುತ್ತೆ? ಇದನ್ನೆಲ್ಲ ನಾವು ಕೇಳಬಾರದಾ? ನೋಂದಾಯಿತ ಸಂಸ್ಥೆ, ಸಂಘಟನೆಗಳು ಆರಾರು ತಿಂಗಳಿಗೆ ಲೆಕ್ಕದ ವರದಿ ಕೊಡಬೇಕು. ಇವರು ಕೊಡ್ತಾರಾ? ಆರ್‌ಎಸ್‌ಎಸ್ ಆಫ್ಟ್ರಾಲ್ ಒಂದು ಎನ್‌ಜಿಒ, ಅದರ ಮುಖ್ಯಸ್ಥರಿಗೆ ಯಾಕೆ ಅಷ್ಟೊಂದು ಭದ್ರತೆ? ಪಥಸಂಚಲನ ಹಾಗೇ ಮಾಡ್ತೇವೆ, ಹೀಗೇ ಮಾಡ್ತೇವೆ ಅಂತಾರೆ, ನಾವೇನು ಆರ್‌ಎಸ್‌ಎಸ್ ಗುಲಾಮರಾ ಎಂದು ಕೆಂಡಕಾರಿದರು.
ಬೆಳಗಾವಿಯಲ್ಲಿ ಎಂಇಎಸ್ ಕರಾಳ ಆಚರಣೆಗೆ ಪೊಲೀಸ್ ಭದ್ರತೆ ವಿಚಾರವಾಗಿ ಮಾತನಾಡಿ, ಯಾರಿಗೂ ಅನುಮತಿ ಕೊಡಬಾರದು. ಲೋಕಲ್‌ನಲ್ಲಿ ಸಮಸ್ಯೆ ಇಲ್ಲದಿದ್ರೆ ಸ್ಥಳೀಯವಾಗಿ ಕ್ರಮ ತಗೋತಾರೆ. ಜಾರಕಿಹೊಳಿ ಸಾಹೇಬ್ರು ಎಂಇಎಸ್ ವಿರುದ್ಧ ಕ್ರಮ ತೆಗೆದುಕೊಳ್ಳೋದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಡಿಕೆಶಿ ಅಧಿಕಾರ ಸ್ವೀಕಾರ ಬಗ್ಗೆ ಚರ್ಚೆ ಕುರಿತು ಪ್ರತಿಕ್ರಿಯಿಸಿ, ಇದನ್ನು ಯಾರು ಹೇಳಿದ್ದಾರೆ? ಯಾರಾದ್ರೂ ಹೇಳಿದ್ರೆ ಮಾತಾಡಬಹುದು. ಅಧಿಕೃತವಾಗಿ ನಮ್ಮ ನಾಯಕರು ಮಾತಾಡಿದ್ರೆ ನಾವು ಮಾತಾಡಬಹುದು. ಡಿಕೆಶಿ ಅವರೇ ನಿನ್ನೆ ಮಾತಾಡಿದ್ದಾರಲ್ಲ, ಅವರು ಮತ್ತು ಸಿಎಂ ಮಾತ್ರ ಮಾತಾಡಿದ್ರೆ ಅಧಿಕೃತ ಅಂತ. ಸಿಎಂ ಸಾಹೇಬ್ರು, ಡಿಕೆಶಿ ಸಾಹೇಬ್ರು ಅದಾಗಲೇ ಇದರ ಬಗ್ಗೆ ಮಾತಾಡಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾವು ಮಾತಾಡೋದ್ರಲ್ಲಿ ಪ್ರಯೋಜನ ಇಲ್ಲ ಎಂದರು.
ಸತೀಶ್ ಜಾರಕಿಹೊಳಿ ದೆಹಲಿ ಭೇಟಿ ಬಗ್ಗೆ ಮಾತನಾಡಿ, ನಮ್ಮ ನಾಯಕರು ಭೇಟಿ ಕೊಡ್ತಿರಬಹುದು. ದೆಹಲಿಗೆ ಹೋದರೆ ಹೈಕಮಾಂಡ್ ಭೇಟಿ ಮಾಡ್ತಾರೆ. ಅದರಲ್ಲಿ ಏನೂ ಮರ್ಮ ಇಲ್ಲ. ದೆಹಲಿ ಭೇಟಿಯಲ್ಲಿ ವಿಶೇಷ ಇಲ್ಲ. ನಾನೂ ನಾಡಿದ್ದು ಹೋಗ್ತೇನೆ, ಟೆಕ್ ಸಮ್ಮಿಟ್ ಸಂಬಂಧ ಚರ್ಚೆ ಮಾಡಲು ಹೋಗ್ತೇನೆ. ಆದರೆ, ಯಾವಾಗ ಏನಾಗಬೇಕೋ ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರ್ತೀವಿ ಅಂತ ಎಲ್ಲರೂ ಮಾತಾಡಿದ್ದಾರಲ್ಲ ಎಂದು ಹೇಳಿದರು.
ಡಿಸಿಎಂ ಸ್ಥಾನಕ್ಕೆ ಆಕಾಂಕ್ಷಿನಾ ಎಂಬ ಪ್ರಶ್ನೆಗೆ, ನನ್ನ ಬಿಟ್ಬಿಡಿ. ನಾನು ಕಲಬುರಗಿ ಉಸ್ತುವಾರಿ ಆಗಿದ್ದೀನಿ, ಸಚಿವ ಆಗಿದ್ದೀನಿ. ಇವರೆಡು ಕೆಲಸ ಮಾಡ್ಕೊಂಡು ಹೋಗ್ತಿದ್ದೀನಿ. ಜನ ಈ ಎರಡು ಜವಾಬ್ದಾರಿ ಕೊಟ್ಟಿದ್ದಾರೆ, ಮಾಡ್ಕೊಂಡು ಹೋಗ್ತಿದ್ದೀನಿ ಎಂದು ಪ್ರತಿಕ್ರಿಯಿಸಿದರು.
ಟನಲ್ ರಸ್ತೆ ಯೋಜನೆಗೆ ಬಿಜೆಪಿ ವಿರೋಧ ಬಗ್ಗೆ ಮಾತನಾಡಿ, ಬಿಜೆಪಿಯವರಿಗೆ ತಲೆ ಕೆಟ್ಟಿದೆ. ಯಾವ ಯೋಜನೆಯೂ ಬೇಡ ಅಂತಾರೆ. ಸ್ಟೀಲ್ ಬ್ರಿಡ್ಜ್‌ಗೂ ವಿರೋಧ ಮಾಡಿ ನಿಲ್ಸಿದ್ರು. ಈಗ ಟನಲ್ ರೋಡ್‌ಗೂ ವಿರೋಧ ಮಾಡಿದ್ಮೇಲೆ ಪರಿಹಾರ ಹೇಳಲಿ. ಹೋಗಿ ಕೇಂದ್ರದ ಬಳಿ ಅನುದಾನ ಕೇಳಿ ಅಂದ್ರೆ ಆಗಲ್ಲ ಇವರಿಗೆ. ಅಲ್ಲಿ ಹೋಗಿ ಅನುದಾನ ಕೇಳೋ ಯೋಗ್ಯತೆ ಇಲ್ಲ ಇವರಿಗೆ. ಕೇಂದ್ರದ ಬಿಜೆಪಿಯಲ್ಲಿ ರಾಜ್ಯದ ಬಿಜೆಪಿ ಸಂಸದರಿಗೆ ನಯಾ ಪೈಸೆ ಕಿಮ್ಮತ್ತಿಲ್ಲ ಎಂದು ಕಿಡಿಕಾರಿದರು.

