– ಲಾಠಿ ಹಿಡಿದು ಪಥಸಂಚಲನ ನಡೆಸಲು ಅನುಮತಿ ಸಿಕ್ರೆ ನಮ್ಮ ಅಭ್ಯಂತರ ಇಲ್ಲ ಎಂದ ಸಚಿವ
ಕಲಬುರಗಿ: ಚಿತ್ತಾಪುರ ಪಥಸಂಚಲನ ವಿವಾದವನ್ನು ಆರ್‌ಎಸ್‌ಎಸ್ (RSS) ಪ್ರತಿಷ್ಠೆಯ ವಿಚಾರ ಮಾಡಿಕೊಂಡಿದೆ. ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ಪ್ರಯತ್ನ ನಡೆಯುತ್ತಿದ್ದು, ಸಮಾಜದ ಶಾಂತಿ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು.
ಶುಕ್ರವಾರ ಐವಾನ್-ಇ-ಶಾಹಿ ಅತಿಥಿಗೃಹದಲ್ಲಿ ಶುಕ್ರವಾರ ಮಾಧ್ಯಮ ಮಾತನಾಡಿ, ಪಥಸಂಚಲನದಲ್ಲಿ ಭಾಗವಹಿಸಲು ಕೆಲವರಿಗೆ ಕರೆ ನೀಡಲಾಗಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಕಾಲ್ ಮಾಡಿದ್ದಾರೆ. ಆ ಬಗ್ಗೆ ವಿಚಾರಿಸಲಾಗಿದ್ದು, ಅವರಿಗೆ ದೇಶಭಕ್ತಿ ಇತ್ಯಾದಿ ಕುರಿತು ಹೇಳಲಾಗುತ್ತಿದೆ ಎನ್ನುವುದನ್ನು ಹೊರತುಪಡಿಸಿ ಬೇರೆ ಹೇಳಿರಲಿಲ್ಲ ಎನ್ನುವ ಮಾಹಿತಿ ಬಂದಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಹಾಗೂ ಸಮಾಜದ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಅದರಲ್ಲೇನು ತಪ್ಪಿದೆ ಎಂದರು. ಇದನ್ನೂ ಓದಿ: `ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ’ – ಶಾಸಕನ ಮಗನಿಗೆ ತನ್ನದೇ ಹೆಸರಿಟ್ಟು ನಾಮಕರಣ ನೆರವೇರಿಸಿದ ಡಿಕೆಶಿ
ನಾನು ಸರ್ಕಾರಿ ಜಾಗದಲ್ಲಿ ಕೇವಲ ಆರ್‌ಎಸ್‌ಎಸ್ ಅಲ್ಲ, ಯಾವುದೇ ಸಂಘಟನೆಗಳು ಕಾರ್ಯಕ್ರಮ ನಡೆಸದಂತೆ ಪತ್ರ ಬರೆದಿದ್ದೇನೆ. ಅದರಲ್ಲಿ ತಪ್ಪೇನೂ ಇಲ್ಲ. ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಂಡಿದ್ದೇನೆ. ಆದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ನನ್ನ ವಿರುದ್ಧ ಪ್ರಚಾರ ಆರಂಭಿಸಿದೆ. ನನ್ನ ಮೇಲೆ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಅವನನ್ನು ಪ್ರಚೋದಿಸಿದವರ ಮೇಲೂ ಕ್ರಮ ಅಗತ್ಯ ಎಂದು ಹೇಳಿದರು.
ಇನ್ನು, ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಕೇಳದೆ, ಕೇವಲ ಮಾಹಿತಿ ನೀಡಿದೆ. ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮಕ್ಕೆ ಹೈಕೋರ್ಟ್ ನಿಷೇಧ ಇದ್ದು, ಅನುಮತಿಯಿಲ್ಲದೆ ಸಾವಿರಾರು ಜನರನ್ನು ಸೇರಿಸುವುದು ಕಾನೂನು ಉಲ್ಲಂಘನೆಯಾಗಲಿದೆ. ಚಿತ್ತಾಪುರದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ. ಹೈಕೋರ್ಟ್ ತೀರ್ಪು ಬರುವವರೆಗೆ ಎಲ್ಲರೂ ಕಾಯಬೇಕು. ಲಾಠಿ ಹಿಡಿದು ಪಥಸಂಚಲನ ನಡೆಸುವುದಕ್ಕೆ ಅನುಮತಿ ಸಿಕ್ಕರೆ ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.
ಸೇಡಂ ಸೇರಿದಂತೆ ಹಲವೆಡೆ ಪಥಸಂಚಲನದ ವೇಳೆ ಕಾನೂನು ಉಲ್ಲಂಘನೆ ನಡೆದಿದೆ. ಅದನ್ನು ಕೋರ್ಟ್ ಗಮನಕ್ಕೆ ತರಲಾಗುವುದು. ಚಿತ್ತಾಪುರದಲ್ಲಿ ಮಾತ್ರ ವಿವಾದ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚಿತ್ತಾಪುರದಲ್ಲಿ ಯುವಕರ ಭವಿಷ್ಯ ಮುಖ್ಯವಾದ್ದರಿಂದ ಕ್ರಮ ಕೈಗೊಳ್ಳಲಾಗಿದೆ ಎಂದರು.
ಆರ್‌ಎಸ್‌ಎಸ್‌ನಲ್ಲಿ ಬಿಜೆಪಿಯ ಪಾತ್ರವೇನು?
ಚಿತ್ತಾಪುರ ಶಾಂತಿ ಸಭೆಗೆ ಆರ್‌ಎಸ್‌ಎಸ್ ಬದಲಿಗೆ ಬಿಜೆಪಿ ಮುಖಂಡರು ಬಂದಿದ್ದರು. ಅವರು ಶಾಂತಿ ಕಾಪಾಡಲು ಬಂದರೋ ಅಥವಾ ಭಂಗ ಉಂಟುಮಾಡಲು ಬಂದರೋ ಗೊತ್ತಿಲ್ಲ. ಆದರೆ, ರಾಜಕೀಯದಲ್ಲಿ ಇಲ್ಲ ಅಂತ ಆರ್‌ಎಸ್‌ಎಸ್‌ನವರೇ ಹೇಳುತ್ತಾರೆ. ಸರ್ಕಾರದ ಆದೇಶ ಬಂದ ನಂತರ ಆರ್‌ಎಸ್‌ಎಸ್‌ಗಿಂತ ಹೆಚ್ಚು ಬಿಜೆಪಿಯವರೇ ಮುಗಿದುಬಿದ್ದು ಮಾತಾಡುತ್ತಿದ್ದಾರೆ. ಬಿಜೆಪಿಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧ? ಆರ್‌ಎಸ್‌ಎಸ್‌ನಲ್ಲಿ ಬಿಜೆಪಿಯ ಪಾತ್ರವೇನು ಎಂದು ಪ್ರಶ್ನೆ ಮಾಡಿದರು.
ಹೈಕೋರ್ಟ್‌ನಲ್ಲಿ ಪ್ರಶ್ನೆ
ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಕುರಿತಾಗಿ ಪತ್ರ ಬರೆದಿದ್ದೆ. ಆದರೆ ಎಲ್ಲರೂ ಆರ್‌ಎಸ್‌ಎಸ್ ಅನ್ನು ಹೇಗೆ ಬ್ಯಾನ್ ಮಾಡುತ್ತೀರಿ ನೋಡ್ತೇವೆ ಎನ್ನುತ್ತಿದ್ದಾರೆ. ನೋಂದಣಿಯೇ ಇಲ್ಲದ ಆರೆಸ್ಸೆಸ್ ಸಂಸ್ಥೆಯನ್ನು ನಿಷೇಧಿಸುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ. ಆರೆಸ್ಸೆಸ್ ನೋಂದಣಿ ಪತ್ರದ ವಿಚಾರ ಕುರಿತಂತೆ ಹೈಕೋರ್ಟ್ನಲ್ಲಿ ಸರಿಯಾದ ಸಮಯದಲ್ಲಿ ಪ್ರಶ್ನೆ ಮಾಡಲಾಗುವುದು. ಈಗ ಪಥಸಂಚಲನದ ವಿಚಾರ ಮಾತ್ರ ಬಂದಿದೆ. ಅನುಮತಿ ಸಿಕ್ಕರೆ ನೋಂದಣಿ ವಿಚಾರದಲ್ಲಿಯೂ ಕಾನೂನು ಪ್ರಕಾರ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

