ಬೆಂಗಳೂರು: ದಶಕಗಳ ಕಾಲ ಕರ್ನಾಟಕದ ಎಲೆಕ್ಟ್ರಾನಿಕ್ಸ್ (Electronics) ಕ್ಷೇತ್ರದಲ್ಲಿ ದೈತ್ಯ ಸಂಸ್ಥೆಯಾಗಿದ್ದ ಕಿಯೋನಿಕ್ಸ್ ಸಂಸ್ಥೆಯನ್ನು (Keonics Institute) ಮತ್ತೊಮ್ಮೆ ಪ್ರಸ್ತುತತೆಗೆ ತರುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶುಕ್ರವಾರ ವಿಸ್ತ್ರತವಾಗಿ ಚರ್ಚಿಸಲಾಯಿತು.
ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕಿಯೋನಿಕ್ಸ್ ಸಂಸ್ಥೆಗೆ ಈ ಹಿಂದೆ ಇದ್ದ ಮಾನ್ಯತೆಯನ್ನು ಮರಳಿ ತರಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ವಿವರಿಸಿದರು.
ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ನೂತನ ಅಭೇದ್ಯ ಸುರಕ್ಷತಾ ಕ್ರಮಗಳು ಹಾಗೂ ಪಾರದರ್ಶಕ ನೀತಿಯನ್ನು ಜಾರಿಗೊಳಿಸಲು ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು. ಕಿಯೋನಿಕ್ಸ್ ಸಂಸ್ಥೆಯ ವಹಿವಾಟಿನ ಅಧಿಕೃತ ಪಟ್ಟಿಯಲ್ಲಿರುವ ಎಲ್ಲಾ ಖಾಸಗಿ ಸರಬರಾಜುದಾರರು ಹಾಗೂ ಸೇವಾದಾರರ ಸಮಗ್ರ ಪರಿಷ್ಕರಣೆ ನಡೆಸಲು ಸಚಿವರು ನಿರ್ದೇಶನ ನೀಡಿದರು. ಇದನ್ನೂ ಓದಿ: ಶಿವಕುಮಾರ್ ಅಣ್ಣ.. ಭರವಸೆ ಕೊಟ್ಟಿರೋದು ನೀವು, ಮೋದಿ ಅಲ್ಲ: ಅಶೋಕ್ ಕಿಡಿ
ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಭವಿಷ್ಯದಲ್ಲಿ ಕಿಯೋನಿಕ್ಸ್ ಮಹತ್ತರ ವಹಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಸಂಸ್ಥೆಯನ್ನು ಸಜ್ಜುಗೊಳಿಸಲು ಕೈಗೊಳ್ಳಬಹುದಾದ ಕಾರ್ಯತಂತ್ರಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ ಸಚಿವರು ಐಟಿ ಶಿಕ್ಷಣ, ಐಟಿ ಪಾರ್ಕ್ ಕುರಿತು ವಿಶೇಷ ನೀಲನಕ್ಷೆ ತಯಾರಿಸಿ ಪ್ರಸ್ತುತಪಡಿಸುವಂತೆ ನಿರ್ದೇಶಿಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವಿ ಡಿ ಚನ್ನಣ್ಣನವರ್ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಚಿವರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಬಡವರಿಗೆ ಕೇಂದ್ರದಿಂದ ದ್ರೋಹ – ಜೂ.20ಕ್ಕೆ ಕಾಂಗ್ರೆಸ್‌ನಿಂದ ರಾಜ್ಯವ್ಯಾಪಿ ಪ್ರತಿಭಟನೆ: ಡಿಕೆಶಿ