ರಾಯಚೂರು: ಖಾಸಗಿ ವೈದ್ಯರ ಮುಷ್ಕರದ ಪರಿಣಾಮ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕೊಪ್ಪಳ ಮೂಲದ 62 ವರ್ಷದ ನಿವೃತ್ತ ಎಎಸ್‍ಐ ಈಶ್ವರಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊಪ್ಪಳದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಈಶ್ವರಪ್ಪರನ್ನ ಧಾರವಾಡದ ಖಾಸಗಿ ಆಸ್ಪತ್ರೆಗೆ ಕರೆದ್ಯೊಯ್ಯಲಾಗಿತ್ತು. ಆದ್ರೆ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಚಿಕಿತ್ಸೆ ಸಿಗದ ಕಾರಣ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು.
ಗಂಭೀರ ಸ್ಥಿತಿಯಲ್ಲಿದ್ದ ಈಶ್ವರಪ್ಪ ಆಕ್ಸಿಜನ್ ಸಹಾಯದಿಂದ ನಿನ್ನೆಯವರೆಗೂ ಉಸಿರಾಡುತ್ತಿದ್ದರು. ಆದ್ರೆ ಇದೀಗ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ.
ವೈದ್ಯರ ಮುಷ್ಕರ ಮುಂದುವರೆಯುವ ಹಿನ್ನೆಲೆಯಲ್ಲಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ 800 ರೋಗಿಗಳು ಬರುತ್ತಿದ್ದರೆ ಕಳೆದ 4 ದಿನಗಳಿಂದ 1500ಕ್ಕೂ ಅಧಿಕ ಸಂಖ್ಯೆಯಲ್ಲಿ ಹೊರರೋಗಿಗಳು ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಸಮಸ್ಯೆ ತಲೆದೋರಿದ್ದು, ಒಂದೇ ಬೆಡ್ ನಲ್ಲಿ ಇಬ್ಬರು ರೋಗಿಗಳನ್ನು ಮಲಗಿಸುತ್ತಿದ್ದಾರೆ.