ಬೆಂಗಳೂರು: ಖಾಸಗಿ ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ನರ್ಸಿಂಗ್ ಹೋಂ, ಕ್ಲಿನಿಕ್‍ಗಳಲ್ಲಿ ಹೊರ ರೋಗಿಗಳ ವಿಭಾಗ ಬಂದ್ ಆಗಿದೆ.
ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಬದಲಿ ವ್ಯವಸ್ಥೆ ಮಾಡಿದೆ. ತುರ್ತು ಚಿಕಿತ್ಸೆ ಅನಿವಾರ್ಯವಾಗಿರುವವರು ಖಾಸಗಿ ಆಸ್ಪತ್ರೆಗಳಿಗೆ ಅಲೆಯದೆ ಸಮೀಪದ ಸರ್ಕಾರಿ ಇಲ್ಲವೇ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಖಾಸಗಿ ವೈದ್ಯರು ಮುಷ್ಕರ ಕೈಗೊಂಡಿರುವ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗಳ ವೈದ್ಯರು ರಜೆ ಹೋಗದೆ ಆರೋಗ್ಯ ಸೇವೆ ನೀಡಬೇಕೆಂದು ಸರ್ಕಾರ ಆದೇಶ ನೀಡಿದೆ. ಹೀಗಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಆಸ್ಪತ್ರೆಗಳ ಒಪಿಡಿ ಸಹಿತ ನಾನಾ ವಿಭಾಗಗಳು ಕೆಲಸ ಮಾಡಲಿವೆ. ವೈದ್ಯರು, ದಾದಿಯರು ಹಾಗೂ ಟೆಕ್ನಿಶಿಯನ್ಸ್ ಹೆಚ್ಚುವರಿ ಕೆಲಸ ಮಾಡುವಂತೆ ಸೂಚಿಸಿರುವುದರಿಂದ ಎಲ್ಲಾ ರೀತಿಯ ಚಿಕಿತ್ಸೆಗಳು ಲಭ್ಯವಿರಲಿದೆ.
Advertisement
Advertisement
ಇದಕ್ಕಾಗಿ ಆಯಾ ಆಸ್ಪತ್ರೆಗಳಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಆಗಮಿಸುವ ಎಲ್ಲಾ ರೋಗಿಗಳಿಗೂ ಚಿಕಿತ್ಸೆ ಒದಗಿಸುವುದರಿಂದ ಸಾರ್ವಜನಿಕರು ನಿಶ್ಚಿಂತೆಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಬಹುದು. ಖಾಸಗಿ ವೈದ್ಯರ ಪ್ರತಿಭಟನೆ ಒಪಿಡಿಗೆ ಮಾತ್ರ ಸೀಮಿತ ಇದ್ದರೂ, ಕೆಲವೆಡೆ ತುರ್ತು ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದನ್ನು ಗಮನಿಸಿ ರೋಗಿಗಳು ಅಲ್ಲಿಗೆ ತೆರಳುವ ಮುನ್ನ ದೂರವಾಣಿ ಕರೆ ಮಾಡಿ ಆಸ್ಪತ್ರೆ ತೆರದಿರುವುದನ್ನು ಖಚಿತಪಡಿಸಿಕೊಂಡು ಮುಂದುವರಿಯಬಹುದು.
Advertisement
Advertisement
ತುರ್ತು ಪ್ರಕರಣಗಳಿದ್ದಲ್ಲಿ ಸಮೀಪದ ಸರ್ಕಾರಿ ಅಥವಾ ಪಾಲಿಕೆ ಆಸ್ಪತ್ರೆಗಳತ್ತ ಧಾವಿಸಬಹುದು. ಕ್ಷ-ಕಿರಣ ಸಹಿತ ಲ್ಯಾಬ್ ಟೆಸ್ಟ್‍ಗೆ ಸಮಯ ನಿಗದಿ ಆಗಿದ್ದಲ್ಲಿ ಮೊದಲೇ ಖಾತರಿಪಡಿಸಿಕೊಳ್ಳುವುದು ಒಳ್ಳೆಯದು. ತುರ್ತು ಇಲ್ಲದಿದ್ದಲ್ಲಿ ಇನ್ನೊಂದು ದಿನಕ್ಕೆ ಮುಂದೂಡುವುದು ಉತ್ತಮ.
ತುರ್ತು ಚಿಕಿತ್ಸೆಗಾಗಿ ಸಿಟಿ ಮಾರುಕಟ್ಟೆ ಸಮೀಪ ಇರುವ ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆ, ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಹೃದಯ ಸಂಬಂಧಿ ಕಾಯಿಲೆಗಳಿಗೆ ಜಯನಗರ 9ನೇ ಬ್ಲಾಕ್‍ನಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ, ಅಪಘಾತದಂತಹ ಪ್ರಕರಣಗಳಿಗೆ ಸಂಜಯಗಾಂಧಿ ಆಸ್ಪತ್ರೆ, ನಿಮ್ಹಾನ್ಸ್ ಹಾಗೂ ಯಲಹಂಕ, ಕೆ.ಆರ್.ಪುರಂನಲ್ಲಿರುವ ತಾಲೂಕು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು. ಕ್ಯಾನ್ಸರ್ ರೋಗಿಗಳು ಕಿದ್ವಾಯಿ ಆಸ್ಪತ್ರೆಗೆ ಹೋಗಬಹುದು.