ಬೆಂಗಳೂರು: ಮನೆಗಳನ್ನು ಬಾಡಿಗೆ ಪಡೆದು, ಲೀಸ್‍ಗೆ ಕೊಟ್ಟು ನೂರಾರು ಮಂದಿಗೆ ವಂಚನೆ ಮಾಡಿದ ಆರೋಪ (Fraud Case) ನಗರದ (Bengaluru) ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಲೀಕನ ವಿರುದ್ಧ ಕೇಳಿಬಂದಿದೆ.
ವಿವೇಕ್ ಕೇಶವನ್ ಎಂಬಾತ ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಬ್ರೋಕರ್ ಕಂಪನಿಯ ಮಾಲೀಕನಾಗಿದ್ದು, ಈತನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಈತ ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ (Electronic City) ಸೇರಿದಂತೆ ಹಲವೆಡೆ ಮನೆಗಳನ್ನು ಬಾಡಿಗೆಗೆ ಪಡೆಯುತ್ತಿದ್ದ. ಬಳಿಕ ಲೀಸ್‍ಗಾಗಿ ಮನೆ ಹುಡುಕುತ್ತಿದ್ದವರಿಗೆ ವೆಬ್‍ಸೈಟ್‍ನಲ್ಲಿ ಗಾಳ ಹಾಕುತ್ತಿದ್ದ. ಬಳಿಕ ಅವರಿಂದ ಹಣ (Money) ಪಡೆದು ಮನೆ ಕೀ ನೀಡುತ್ತಿದ್ದ. ಮನೆ ಮಾಲೀಕರಿಗೆ ಸರಿಯಾಗಿ 2 ತಿಂಗಳು ಬಾಡಿಗೆ ಹಣ ನೀಡುತ್ತಿದ್ದ. ಆಮೇಲೆ ಹಣ ಕೊಡುತ್ತಿರಲಿಲ್ಲ. ಈ ವೇಳೆ ಮನೆಯಲ್ಲಿದ್ದವರನ್ನು ಮಾಲೀಕರು ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಹೀಗೆ ಸುಮಾರು 60 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ನಾನು ಸತ್ತರೆ ನಂದಕಿಶೋರ್, ಸಾರಾ ಗೋವಿಂದು ಕಾರಣ – ವೀಡಿಯೋ ಹರಿಬಿಟ್ಟ ಶಬರೀಶ್ ಶೆಟ್ಟಿ
ಈಗ ಲಕ್ಷಾಂತರ ರೂಪಾಯಿ ಹಣ ಕೊಟ್ಟು ಲೀಸ್‍ಗೆ ಪಡೆದಿದ್ದವರು ಮಾತ್ರ ಬೀದಿಗೆ ಬಿದ್ದಿದ್ದಾರೆ. ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ವಂಚನೆಗೊಳಗಾದ ಜನ ಒತ್ತಾಯಿಸಿದ್ದಾರೆ. ಇನ್ನೂ ಈತ ಕೇಂದ್ರ ಸಚಿವ ರಾಜನಾಥ್ ಸಿಂಗ್ ಜೊತೆ ಫೋಟೋ ಸಹ ತೆಗೆಸಿಕೊಂಡಿದ್ದ ಎಂದು ತಿಳಿದುಬಂದಿದೆ.
ರಾತ್ರೋರಾತ್ರಿ ಕಂಪನಿಯನ್ನು ಖಾಲಿ ಮಾಡಿಕೊಂಡು ವಂಚಕ ಪರಾರಿಯಾಗಿದ್ದಾನೆ. ಈಗ ಮನೆ ಖಾಲಿ ಮಾಡಿ ಎಂದು ಜನರಿಗೆ ಮಾಲೀಕರಿಂದ ಒತ್ತಡ ಬರುತ್ತಿದೆ. ಲೀಸ್‍ಗೆ ಕೊಟ್ಟ ಲಕ್ಷಾಂತರ ರೂಪಾಯಿ ಹಣವೂ ಇಲ್ಲದೇ, ಇತ್ತ ಮನೆಯೂ ಇಲ್ಲದೆ ಜನ ಬೀದಿಗೆ ಬಿದ್ದಿದ್ದಾರೆ. ಈ ಸಂಬಂಧ ವಿವೇಕ್ ಕೇಶವನ್ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಸ್ಸಾಂ ನಾಗರಿಕ ಸೇವಾ ಅಧಿಕಾರಿ ಮನೆ ಮೇಲೆ ದಾಳಿ: 2 ಕೋಟಿ ನಗದು, ಆಭರಣ ಜಪ್ತಿ