ಹಾವೇರಿ: ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿ ಕನ್ನಡಿಗ ನವೀನ್ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದಾರೆ. ಜೂನ್ 20ರಂದು ರಾಜ್ಯಕ್ಕೆ ಭೇಟಿ ನೀಡುವ ವೇಳೆ ಖುದ್ದು ಪ್ರಧಾನಿ ಮೋದಿಯವರು ನವೀನ್ ತಂದೆ, ತಾಯಿ ಮತ್ತು ಸಹೋದರನನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಪ್ರಧಾನಿ ಭೇಟಿ ಸಂಬಂಧ ಪ್ರಧಾನಿ ಕಚೇರಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಮಾಹಿತಿ ದೊರೆತಿದ್ದು, ನವೀನ್ ತಂದೆ ಮತ್ತು ತಾಯಿ ಈಗಾಗಲೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
Advertisement
2022ರ ಮಾರ್ಚ್ 1 ರಂದು ರಾಜ್ಯಕ್ಕೆ ಬರಸಿಡಿಲು ಬಡಿದಂತಾಗಿತ್ತು. ಯಾಕಂದ್ರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಿ ನವೀನ್ ಗ್ಯಾನಗೌಡರ ಎಂಬಾತ ಮೃತಪಟ್ಟಿದ್ದ. ಮೃತ ನವೀನ್ ಉಕ್ರೇನ್ ನಲ್ಲಿ ಎಂಬಿಬಿಎಸ್ ನಾಲ್ಕನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದ. ನವೀನ್ ಮೃತಪಟ್ಟ ಸುದ್ದಿ ಆತನ ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿತ್ತು. ನವೀನ್ ಮೃತಪಟ್ಟ ಸುದ್ದಿ ತಿಳಿದು ಅದೇ ದಿನ ಪ್ರಧಾನಿ ನರೇಂದ್ರ ಮೋದಿಯವರು ಮೃತ ನವೀನ್ ತಂದೆ ಶೇಖರಗೌಡ ಗ್ಯಾನಗೌಡರಗೆ ಕರೆ ಮಾಡಿ ಮಾತನಾಡಿ ಸಾಂತ್ವನ ಹೇಳಿದ್ದರು.
Advertisement
Advertisement
ನಂತರ ಪ್ರಧಾನಿಯವರಿಗೆ ನವೀನ್ ಕುಟುಂಬವನ್ನು ಭೇಟಿ ಮಾಡಲು ಆಗಿರಲಿಲ್ಲ. ಆದ್ರೆ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಬರುತ್ತಿದ್ದಾರೆ. ಮೈಸೂರಿನಲ್ಲಿ ಜೂನ್ 21ರಂದು ನಡೆಯುವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಜೂನ್ 20ರಂದು ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿಯವರು ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ತಂದೆ, ತಾಯಿ ಮತ್ತು ಸಹೋದರನನ್ನು ಭೇಟಿ ಮಾಡಲಿದ್ದಾರೆ. ಇದನ್ನೂ ಓದಿ: ಯಾವುದೇ ಧರ್ಮದವರಿಗೆ ನೋಯಿಸುವ ಉದ್ದೇಶವಿಲ್ಲ – ಕ್ಷಮೆಯಾಚಿಸಿದ ಸಾಯಿ ಪಲ್ಲವಿ
Advertisement
ಪ್ರಧಾನಿಯವರ ಭೇಟಿಗೆ ಪ್ರಧಾನಿಯವರ ಕಚೇರಿಯಿಂದ ಎರಡು ದಿನಗಳ ಹಿಂದೆ ಮೃತ ವಿದ್ಯಾರ್ಥಿ ನವೀನ್ ತಂದೆಗೆ ಮಾಹಿತಿ ನೀಡಿದ್ದಾರೆ. ಪ್ರಧಾನಿಯವರ ಕಚೇರಿಯಿಂದ ಮಾಹಿತಿ ಬಂದ ಕೆಲವೇ ನಿಮಿಷಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ನವೀನ್ ತಂದೆಗೆ ಕರೆ ಮಾಡಿ ಮಾತನಾಡಿದ್ದಾರೆ. ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಅವಕಾಶ ಕಲ್ಪಿಸಿದ್ದು, ಭೇಟಿಗೆ ವ್ಯವಸ್ಥೆ ಮಾಡಲಾಗಿದೆ. ಒಂದು ದಿನ ಮುಂಚಿತವಾಗಿಯೇ ಬೆಂಗಳೂರಿಗೆ ಬರುವಂತೆ ಸಿಎಂ ಹೇಳಿದ್ದಾರೆ ಅಂತಾ ನವೀನ್ ತಂದೆ ಶೇಖರಗೌಡ ಹೇಳಿದ್ದಾರೆ.
ಪ್ರಧಾನಿಯವರ ಭೇಟಿಗೆ ಶೇಖರಗೌಡ, ತಾಯಿ ವಿಜಯಲಕ್ಷ್ಮಿ ಮತ್ತು ಸಹೋದರ ಹರ್ಷಗೆ ಅವಕಾಶ ಕಲ್ಪಿಸಲಾಗಿದೆ. ಶನಿವಾರ ರಾತ್ರಿ ನವೀನ್ ತಂದೆ ಶೇಖರಗೌಡ ಮತ್ತು ತಾಯಿ ವಿಜಯಲಕ್ಷ್ಮಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಧಾರವಾಡ ವಿಶ್ವವಿದ್ಯಾಲಯದ ಜಂಟಿ ನಿರ್ದೇಶಕ ಕೃಷ್ಣಮೂರ್ತಿ ಬೆಳೆಗೆರೆಯವರು ನವೀನ್ ತಂದೆ ಮತ್ತು ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾರೆ.
ನವೀನ್ ತಂದೆ ಶೇಖರಗೌಡ ಮತ್ತು ವಿಜಯಲಕ್ಷ್ಮೀ ಭಾನುವಾರ ಬೆಳಗ್ಗೆ ಬೆಂಗಳೂರು ತಲುಪಲಿದ್ದಾರೆ. ನವೀನ್ ಸಹೋದರ ಹರ್ಷ ಬೆಂಗಳೂರಿನಲ್ಲಿಯೇ ಇದ್ದು, ಆತನೂ ಬೆಳಗ್ಗೆ ತಂದೆ ತಾಯಿಯ ಜೊತೆಗೂಡಲಿದ್ದಾನೆ. ಸೋಮವಾರ ಮೂವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ಮಗ ಮೃತಪಟ್ಟ ದುಃಖದಲ್ಲಿರುವ ನವೀನ್ ತಂದೆ ತಾಯಿ ಮತ್ತು ಅಣ್ಣನಿಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಸಾಂತ್ವನ ಹೇಳಲಿದ್ದಾರೆ.
Live Tv