ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಮತ್ತೊಂದು ಅಗ್ನಿಕೊಂಡ ದುರಂತ ಸಂಭವಿಸಿದ್ದು, ಅಗ್ನಿಕೊಂಡದಲ್ಲಿ ಬಿದ್ದ ಅರ್ಚಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಕನಕಪುರ ತಾಲೂಕಿನ ಕೆರಳಾಳುಸಂದ್ರ ಗ್ರಾಮದಲ್ಲಿ ನಡೆದಿದೆ.
ಕೆರಳಾಳುಸಂದ್ರ ಗ್ರಾಮದ ಮಾರಮ್ಮ ದೇವಿಯ ಅರ್ಚಕ ಮುನಿಮಾರೇಗೌಡ ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಕೆರಳಾಳುಸಂದ್ರದಲ್ಲಿ ಕಬ್ಬಾಳಮ್ಮ ಹಾಗೂ ಮಾರಮ್ಮ ದೇವಿಯ ಅಗ್ನಿಕೊಂಡ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ ಇಡೀ ಎಳವಾರ ನಡೆಸಿ ವಿಜೃಂಭಣೆಯಿಂದ ಹಬ್ಬ ಆಚರಣೆಗೆ ಗ್ರಾಮಸ್ಥರೆಲ್ಲಾ ಸಿದ್ದತೆ ನಡೆಸಿಕೊಂಡಿದ್ದರು.
ಇಂದು ಬೆಳಗ್ಗೆ ಕಬ್ಬಾಳಮ್ಮ ದೇವಿ ದೇವಸ್ಥಾನದ ಅರ್ಚಕ ಹಾಗೂ ಮಾರಮ್ಮ ದೇವಿ ಅರ್ಚಕ ಇಬ್ಬರು ಅಗ್ನಿಕೊಂಡ ಹಾಯುವ ಕಾರ್ಯಕ್ರಮವಿತ್ತು. ಮೊದಲಿಗೆ ಕಬ್ಬಾಳಮ್ಮ ದೇವಿಯ ಅರ್ಚಕ ಅಗ್ನಿಕೊಂಡವನ್ನ ಹಾಯ್ದಿದ್ದಾರೆ. ನಂತರ ಅಗ್ನಿಕೊಂಡ ಹಾಯಲು ಬಂದ ಮಾರಮ್ಮ ದೇವಿಯ ಅರ್ಚಕ ಮುನಿಮಾರೇಗೌಡ ನಾಲ್ಕು ಹೆಜ್ಜೆ ಇಡುತ್ತಿದ್ದಂತೆ ಮುಗ್ಗರಿಸಿ ಬಿದ್ದಿದ್ದು ನಂತರ ಎದ್ದು ಹೊರಬಂದಿದ್ದಾರೆ.
ಅಗ್ನಿಕೊಂಡದಲ್ಲಿ ಬಿದ್ದ ಪರಿಣಾಮ ಮುನಿಮಾರೇಗೌಡರಿಗೆ ಸಾಕಷ್ಟು ಸುಟ್ಟಗಾಯಗಳಾಗಿವೆ. ತಕ್ಷಣ ಅರ್ಚಕರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ತಿಂಗಳ 2ನೇ ತಾರೀಕು ಮಾಗಡಿ ತಾಲೂಕಿನ ಕುದೂರು ಹಾಗೂ 23ನೇ ತಾರೀಕು ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಸಹ ಅಗ್ನಿಕೊಂಡ ಹಾಯುವ ವೇಳೆ ಅರ್ಚಕ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.