ಬಿಲಾಸ್‌ಪುರ: ಹಿಂದಿನ ಸರ್ಕಾರಗಳು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿ ಚುನಾವಣೆಯ ಬಳಿಕ ಮರೆತು ಬಿಡುತ್ತಿದ್ದವು. ಆದರೆ ನಮ್ಮ ಸರ್ಕಾರ ಶಂಕುಸ್ಥಾಪನೆ ಮಾಡಿ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಹೇಳಿದ್ದಾರೆ.
ಹಿಮಾಚಲ ಪ್ರದೇಶದ (Himachal Pradesh) ಬಿಲಾಸ್‌ಪುರದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು(AIIMS Bilaspur) ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು ಈ ಆಸ್ಪತ್ರೆಯನ್ನು ಹಸಿರು ಆಸ್ಪತ್ರೆ ಎಂಬುದಾಗಿ ಕರೆಯಲಾಗುವುದು ಎಂದು ತಿಳಿಸಿದರು.
ಕಳೆದ 8 ವರ್ಷಗಳಲ್ಲಿ ನಾವು ಕೆಲಸ ಮಾಡಿದ್ದೇವೆ. ಅಭಿವೃದ್ಧಿಯ ಪ್ರಯೋಜನಗಳು ದೇಶದ ದೂರದ ಭಾಗಗಳಿಗೆ ತಲುಪಬೇಕಿದೆ. ಈ ರಾಜ್ಯವು “ರಾಷ್ಟ್ರ ರಕ್ಷಾ”ದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಈಗ ಈ ಆಸ್ಪತ್ರೆಯೂ “ಜೀವನ ರಕ್ಷಾ”ದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಿಂದ ಭಯೋತ್ಪಾದನೆಯನ್ನು ನಿರ್ನಾಮ ಮಾಡುತ್ತೇವೆ: ಅಮಿತ್ ಶಾ
ವೈದ್ಯಕೀಯ ಸಾಧನ ಪಾರ್ಕ್‌ಗೆ ಆಯ್ಕೆಯಾಗಿರುವ ನಾಲ್ಕು ರಾಜ್ಯಗಳಲ್ಲಿ ಹಿಮಾಚಲ ಪ್ರದೇಶವೂ ಆಯ್ಕೆಯಾಗಿದೆ. ಪ್ರಪಂಚದ ಜನರು ಭಾರತಕ್ಕೆ ಬಂದಾಗ ಅವರಿಗೆ ವಿಶ್ವ ದರ್ಜೆಯ ಆರೋಗ್ಯ ಸೌಲಭ್ಯಗಳು, ಸುಂದರವಾದ ಮತ್ತು ಆರೋಗ್ಯಕರ ಪರಿಸರದೊಂದಿಗೆ ಸಮಗ್ರ ಚಿಕಿತ್ಸೆ ನೀಡಬೇಕು. ಈ ಕಾರಣಕ್ಕೆ ಹಿಮಾಚಲದಲ್ಲಿ ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕಿದೆ ಎಂದು ಹೇಳಿದರು.
ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಎಂದ ಅವರು ಹಿಮಾಚಲ ಪ್ರದೇಶವನ್ನು ಅವಕಾಶಗಳ ನಾಡು ಎಂದು ಬಣ್ಣಿಸಿದರು. ಪ್ರವಾಸೋದ್ಯಮ ಕ್ಷೇತ್ರ ಅಪಾರ ಉದ್ಯೋಗವನ್ನು ನೀಡುತ್ತದೆ. ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯಲು ಮತ್ತು ವಿದ್ಯುತ್ ಉತ್ಪಾದಿಸಲು ಫಲವತ್ತಾದ ಭೂಮಿಯನ್ನು ಒದಗಿಸುತ್ತದೆ ಎಂದು ಹೇಳಿದರು.
ನೀವು ಹಾಕಿದ ಮತಗಳಿಂದ ಏಮ್ಸ್ ಬಿಲಾಸ್‌ಪುರ, ಅಟಲ್ ಟನಲ್, ಹೈಡ್ರೋ-ಎಂಜಿನಿಯರಿಂಗ್ ಕಾಲೇಜು, ಮತ್ತು ಮೆಡಿಕಲ್ ಡಿವೈಸ್ ಪಾರ್ಕ್ ಉದ್ಘಾಟನೆಯಾಗಿದೆ. ಅಭಿವೃದ್ಧಿ ಯೋಜನೆಗಳನ್ನು ಜೈರಾಮ್ ಠಾಕೂರ್ ರಾಜ್ಯಕ್ಕೆ ತಂದು ಯಶಸ್ವಿಗೊಳಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ನರೇಂದ್ರ ಮೋದಿ ಬಿಲಾಸ್‌ಪುರದ ಏಮ್ಸ್ ಸೇರಿದಂತೆ ರೂ. 3,650 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಅಕ್ಟೋಬರ್ 2017ರಲ್ಲಿ ಆಸ್ಪತ್ರೆಯ ಕಾಮಗಾರಿ ಕೆಲಸಗಳಿಗೆ ಶಂಕುಸ್ಥಾಪನೆಯನ್ನು ಮೋದಿ ನೆರವೇರಿಸಿದ್ದರು.
ಬಿಲಾಸ್ ಪುರದ ಏಮ್ಸ್ 1,470 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 18 ಸ್ಪೆಷಾಲಿಟಿ ಮತ್ತು 17 ಸೂಪರ್ ಸ್ಪೆಷಾಲಿಟಿ ವಿಭಾಗಗಳು, 18 ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು ಮತ್ತು 64 ಐಸಿಯು ಹಾಸಿಗೆಗಳು ಸೇರಿದಂತೆ 750 ಹಾಸಿಗೆಗಳನ್ನು ಹೊಂದಿರುವ ಅತ್ಯಾಧುನಿಕ ಆಸ್ಪತ್ರೆಯಾಗಿದೆ.