ರಾಷ್ಟ್ರಪತಿಗಳ ಸರಳತೆಗೆ ಸಾಕ್ಷಿಯಾದ ಉತ್ಕಲ್ ವಿಶ್ವವಿದ್ಯಾಲಯ

Public TV
1 Min Read
RAMNATH Kovindh

ಭುವನೇಶ್ವರ: ಸರಳತೆಗೆ ಹೆಸರುವಾಸಿಯಾಗಿರುವ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಇದೀಗ ಶಿಷ್ಟಾಚಾರ ಬದಿಗೊತ್ತಿ ತಮ್ಮ ಸ್ನೇಹಿತನನ್ನು ಮಾತನಾಡಿಸುವ ಮೂಲಕ ಸುದ್ದಿಯಾಗಿದ್ದಾರೆ.

ಒಡಿಶಾ ಭುವನೇಶ್ವರದ ಉತ್ಕಲ್ ವಿಶ್ವವಿದ್ಯಾಲಯದ ಪ್ಲಾಟಿನಂ ಜ್ಯೂಬಿಲಿ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ವೀರಭದ್ರ ಸಿಂಗ್ ಅವರು ಕಂಡಿದ್ದಾರೆ. ಈ ವೇಳೆ ತಮ್ಮ ಸ್ನೇಹವನ್ನು ನೆನೆದು, ಶಿಷ್ಟಾಚಾರವನ್ನು ಬದಿಗೊತ್ತಿ ಹತ್ತಿರದಿಂದಲೇ ಮಾತನಾಡಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

RAMNATH KOVIND

ಪ್ರೇಕ್ಷಕರ ಸಾಲಿನಲ್ಲಿ ಬಿಳಿ ತುರ್ಬಾನ್ ಧರಿಸಿ ಕುಳಿತಿದ್ದ ಸಿಂಗ್ ಅವರನ್ನು ಕೋವಿಂದ್ ಅವರು ಗುರುತಿಸಿದ್ದಾರೆ. ನಂತರ ಸುಮಾರು 12 ವರ್ಷಗಳ ಹಿಂದಿನ ಸ್ನೇಹವನ್ನು ನೆನೆದಿದ್ದಾರೆ. ಆಗ ಕಾರ್ಯಕ್ರಮ ಮುಗಿದ ನಂತರ ವೇದಿಕೆ ಮೇಲಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಿಂಗ್ ಅವರನ್ನು ವೇದಿಕೆ ಮೇಲೆ ಕರೆದಿದ್ದಾರೆ. ನಂತರ ಕೋವಿಂದ್ ಹಾಗೂ ಸಿಂಗ್ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಸಿಂಗ್ ಅವರೊಂದಿಗೆ ಕೋವಿಂದ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಕುರಿತು ಸಿಂಗ್ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದು, 12 ವರ್ಷಗಳ ನಂತರ ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿಯಾದೆ. ಕೋವಿಂದ್ ಅವರೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ನನಗೆ ಸಿಕ್ಕಿತ್ತು. 2000-2006ರ ನಡುವೆ ನಾವಿಬ್ಬರೂ ರಾಜ್ಯಸಭಾ ಸದಸ್ಯರಾಗಿದ್ದೆವು. ಆ ಸಮಯದಲ್ಲಿ ನಾವಿಬ್ಬರೂ ಎಸ್‍ಸಿ-ಎಸ್‍ಟಿ ಸಮಿತಿಯ ಸದಸ್ಯರಾಗಿದ್ದೆವು. ಕನಿಷ್ಟ ಎರಡು ವರ್ಷಗಳ ಕಾಲ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ವಿವರಿಸಿದರು.

ರಾಷ್ಟ್ರಪತಿಗಳಿಗೆ ಗುಲಾಬಿ ನೀಡಿ ಶುಭ ಕೋರಿದೆ. ಶಿಷ್ಟಾಚಾರದ ಹಿನ್ನೆಲೆ ಹೆಚ್ಚು ಸಮಯ ಕಳೆಯಲಾಗಲಿಲ್ಲ. ರಾಷ್ಟ್ರಪತಿ ಭವನಕ್ಕೆ ಬರುವಂತೆ ಕೋವಿಂದ್ ಆಹ್ವಾನಿಸಿದ್ದಾರೆ ಎಂದು ತಿಳಿಸಿದರು. ಸಿಂಗ್ ಅವರು ಮಾಜಿ ಸಂಸದರಾಗಿದ್ದು, ರಾಜ್ಯದಲ್ಲಿ ಸಚಿವರಾಗಿ ಸಹ ಕೆಲಸ ಮಾಡಿದ್ದಾರೆ. ಉತ್ಕಲ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದು, ಇದೇ ವಿಶ್ವವಿದ್ಯಾಲಯದಲ್ಲಿ 1965 ರಿಂದ 1967ರ ವರೆಗೆ ಅಭ್ಯಾಸ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *