Connect with us

Districts

SSLC ಫಲಿತಾಂಶ ಸುಧಾರಣೆಗೆ ಮುಂದಾದ ಶಿಕ್ಷಕರು

Published

on

ಕೊಪ್ಪಳ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ತೀವ್ರ ನಿಗಾ ಕಲಿಕಾ ತರಗತಿಯನ್ನು ಶುರು ಮಾಡಲಾಗಿದೆ. ಅದರಲ್ಲೂ ಹಿಂದುಳಿದ ಜಿಲ್ಲೆಯಾಗಿರುವ ಕೊಪ್ಪಳದಲ್ಲಿ ಶಿಕ್ಷಕರು ಹೆಚ್ಚು ಕ್ರಿಯಾಶೀಲರಾಗಿ, ಮಕ್ಕಳ ಮನೆಗೆ ತೆರಳಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಗಂಗಾವತಿ ನಗರದ ಶ್ರೀ ಮತಿ ಎಂಎನ್‍ಎಂ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕರ ದಂಡೇ ಇದ್ದು, ಶಾಲೆಯಲ್ಲಿ 10ನೇ ತರಗತಿ ಮಕ್ಕಳಿಗೆ ವಿಶೇಷ ಕಾಳಜಿಯನ್ನು ತೋರಿಸಲಾಗುತ್ತಿದೆ. ಜೀವನದ ಪ್ರಮುಖ ಘಟ್ಟವಾಗಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಮಕ್ಕಳು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ತರಬೇತಿಯನ್ನು ನೀಡುತ್ತಿದ್ದಾರೆ. ಜೊತೆಗೆ ಇಡೀ ಪಠ್ಯಕ್ರಮವನ್ನು ಮತ್ತೊಂದು ಬಾರಿ ಬೋಧಿಸಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸುವುದು. ಪಠ್ಯದಲ್ಲಿನ ಕಠಿಣ ಅಂಶಗಳನ್ನು ತಿಳಿಯುವಂತೆ ಹೇಳುವುದು. ಇದೆಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಿ ಅವರನ್ನು ಪರೀಕ್ಷೆಗೆ ಅಣಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಶಾಲೆಯಲ್ಲಿ 219 ವಿದ್ಯಾರ್ಥಿನಿಯರು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಕಳೆದ ಒಂದೂವರೆ ತಿಂಗಳಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಶಿಕ್ಷಕರು, ಶಾಲೆ ಆರಂಭಕ್ಕೂ ಮೊದಲು ಒಂದು ಗಂಟೆ, ಶಾಲಾ ಅವಧಿ ಪೂರ್ಣಗೊಂಡ ನಂತರ ಒಂದು ಗಂಟೆ ಮಕ್ಕಳಿಗೆ ಹೆಚ್ಚುವರಿ ಬೋಧನೆ ಮಾಡುತ್ತಾರೆ.

ಆರು ವಿಷಯಗಳಿಗೆ ಒತ್ತು:
ತೀವ್ರ ನಿಗಾ ಕಲಿಕಾ ತರಗತಿಯಲ್ಲಿ ಕೇವಲ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ಈ ಮೂರು ವಿಷಯಗಳಿಗೆ ಮಾತ್ರ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ ತಾಲೂಕಿನಾದ್ಯಂತ ಈ ಮೂರು ವಿಷಯಗಳಿಗೆ ಮಾತ್ರ ಹೆಚ್ಚು ಒತ್ತು ನೀಡಿದರೆ, ಇನ್ನುಳಿದ ಮೂರು ವಿಷಯಗಳಲ್ಲಿ ವಿದ್ಯಾರ್ಥಿಗಳು ಮಂಕಾಗುತ್ತಾರೆ ಎಂದು ಆರು ವಿಷಯಗಳಿಗೂ ತರಬೇತಿಯನ್ನು ನೀಡಲಾಗುತ್ತಿದೆ.

ಮಿಸ್ ಕಾಲ್ ಪ್ರೋಗ್ರಾಂ:
ನಗರದ ಶ್ರೀ ಮತಿ ಎಂಎನ್‍ಎಂ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿನ ಮಕ್ಕಳಿಗೆ ವಿಶೇಷ ಬೋಧನೆ ಜೊತೆಗೆ ಶಿಕ್ಷಕರು ಮನೆ ಮನೆಗೆ ತೆರಳಿ ಪಾಲಕರಿಗೆ ತಮ್ಮ ಮಕ್ಕಳ ಸಾಮಥ್ರ್ಯವನ್ನು ತಿಳಿಸುವುದಲ್ಲದೆ, ತಮ್ಮ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ನಂಬರ್‍ಗಳನ್ನು ತೆಗೆದುಕೊಂಡು ಶಿಕ್ಷಕರು, ಪ್ರತಿನಿತ್ಯ ಬೆಳಗ್ಗೆ ಐದು ಗಂಟೆಗೆ ಮಿಸ್ ಕಾಲ್ ಮಾಡುವ ಮೂಲಕ ಅವರ ಮಕ್ಕಳನ್ನು ಓದಿಕೊಳ್ಳಲು ಎಚ್ಚರಿಸುವಂತೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ತಾಲೂಕಿನಾದ್ಯಂತ ಒಟ್ಟು 45 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಪ್ರತಿ ಶಾಲೆಯಲ್ಲೂ ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡುವುದಲ್ಲದೆ, ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಶ್ರಮವಹಿಸಲಾಗುತ್ತಿದೆ.

Click to comment

Leave a Reply

Your email address will not be published. Required fields are marked *