ಕಾರವಾರ: ಜಾಗೃತ ಶಕ್ತಿಪೀಠಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆಗೆ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. ಜಾತ್ರೆ ಸಂದರ್ಭದಲ್ಲಿ ನವದಿನಗಳ ಕಾಲ ದೇವಿ ವಿರಾಜಮಾನವಾಗುವ ಗದ್ದುಗೆ ಮಂಟಪದ ತಯಾರಿ ಆರಂಭವಾಗಿದ್ದು, ಪುರಾತನ ಶೈಲಿಯ ಶೀಲಾ ಮಂಟಪದ ಮಾದರಿಯಲ್ಲಿ ಜಾತ್ರೆಯ ಮಂಟಪ ಇರಲಿದೆ.
ಕರ್ನಾಟಕದ ಅತಿದೊಡ್ಡ ಜಾತ್ರೆಯಲ್ಲಿ ಒಂದಾದ ಮಾರಿಕಾಂಬಾ ಜಾತ್ರೆ ಮಾರ್ಚ್ 3ರಿಂದ 11ರವರೆಗೆ ನಡೆಯುವ ದೇವಿ ಜಾತ್ರೆಯ ಗದ್ದುಗೆ ಕಳೆ ತುಂಬಿಕೊಳ್ಳುತ್ತಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ದೇವಾಲಯದ ವತಿಯಿಂದ ಜಾತ್ರಾ ಗದ್ದುಗೆಗೆ ಬಣ್ಣ ಬಳಿಯುವ ಕಾರ್ಯ ನಡೆಸಿದೆ.
Advertisement
Advertisement
ಜಾತ್ರೆ ಆರಂಭದಿಂದ ಮುಕ್ತಾಯದವರೆಗೆ ಮಾರಿಕಾಂಬೆ ವಿರಾಜಮಾನವಾಗಿ ಭಕ್ತರಿಗೆ ದರ್ಶನ ನೀಡುವ ಬಿಡಕಿ ಬೈಲಿನಲ್ಲಿರುವ ಜಾತ್ರಾ ಗದ್ದುಗೆಯೂ ಜನಾಕರ್ಷಣೆಯ ಕೇಂದ್ರವಾಗಿದ್ದು ಅದನ್ನು ಸುಂದರಗೊಳಿಸುವ ಕೆಲಸ ಆಗುತ್ತಿದೆ. ಹತ್ತಾರು ಜನರು ಗದ್ದುಗೆ, ಗೋಪುರವನ್ನು ಶುಚಿಗೊಳಿಸಿ, ಬಣ್ಣ ಬಳಿಯುತ್ತಿದ್ದಾರೆ. ಜೊತೆಗೆ ಹಣ್ಣು-ಕಾಯಿ ಮಾಡಿಸುವ ವೇಳೆ ಹಾಗೂ ದೇವಿಯ ದರ್ಶನದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರನ್ನು ಬಿಸಿಲಿನ ಬೇಗೆಯಿಂದ ರಕ್ಷಿಸಲು ಚಪ್ಪರ ನಿರ್ಮಿಸಲಾಗುತ್ತಿದೆ.
Advertisement
Advertisement
ಗದ್ದುಗೆ ಮತ್ತು ಮುಖ ಮಂಟಪದ ಕೆಲಸಗಳು ಶೇ.50ರಷ್ಟು ಸಂಪನ್ನಗೊಂಡಿದ್ದು, ಈ ಕೆಲಸಕ್ಕಾಗಿ 50ಕ್ಕೂ ಹೆಚ್ಚಿನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಚಪ್ಪರ ಕಟ್ಟುವ ಕೆಲಸವನ್ನು ಶಿರಸಿಯ ಆನಂದ ಗೌಳಿ ಜವಾಬ್ದಾರಿ ವಹಿಸಿಕೊಂಡರೆ ಇಡೀ ಜಾತ್ರೆಯನ್ನೆ ರಂಗೇರಿಸುವಂತೆ ಮಾಡುವ ಮುಖ ಮಂಟಪ ಕಟ್ಟುವ ಕಾರ್ಯಕ್ಕೆ ಉಡುಪಿಯ ರಾಜು ಅವರು ಮುಂದಾಗಿದ್ದಾರೆ. ಮಾ. 3ರಂದು ದೇವಿಯ ಕಲ್ಯಾಣೋತ್ಸವ ನಡೆಯಲಿದ್ದು, ಮಾ. 4ರಂದು ರಥೋತ್ಸವದ ಮೂಲಕ ದೇವಿ ಗದ್ದುಗೆಗೆ ಆಗಮಿಸಲಿದ್ದಾಳೆ.
ಇದರಿಂದಾಗಿ ಗದ್ದುಗೆಯಲ್ಲಿ ಅಮ್ಮ ಬರುವ ಸಿದ್ಧತೆಗಾಗಿ ಸಕಲ ಕಾರ್ಯಗಳೂ ಸಮರೋಪಾದಿಯಲ್ಲಿ ನಡೆಯುತ್ತಿದೆ. ಇಡಿ ಶಿರಸಿ ಜಾತ್ರೆಯ ರಂಗಿನಿಂದ ಕಂಗೊಳಿಸುತ್ತಿದ್ದು, ಅಗತ್ಯ ಸಿದ್ಧತೆಗಳು ಭರದಿಂದ ಸಾಗಿದೆ. ದೇವಿಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದು, ಜಾತ್ರೆಯ ಮೂಹುರ್ತಕ್ಕೆ ಕ್ಷಣಗಣನೆ ಆರಂಭವಾಗಿದೆ.