ಬೆಂಗಳೂರು: ವಿಶ್ವವ್ಯಾಪಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಹಲವು ದೇಶಗಳು ಒದ್ದಾಡುತ್ತಿವೆ. ಈ ಮಹಾಮಾರಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ವಿಪ್ರೋ ಲಿಮಿಟೆಡ್, ವಿಪ್ರೋ ಎಂಟರ್ಪ್ರೈಸಸ್ ಲಿಮಿಟೆಡ್ ಮತ್ತು ಅಜೀಮ್ ಪ್ರೇಮ್‍ಜಿ ಫೌಂಡೇಶನ್ ಕೈಜೋಡಿಸಿದ್ದು, ಬರೋಬ್ಬರಿ 1,125 ಕೋಟಿ ರೂ. ನೆರವನ್ನು ನೀಡಲು ಮುಂದಾಗಿದೆ.
ಸಂಸ್ಥೆ ಈಗ ನೀಡುತ್ತಿರುವ ನೆರವು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಡಲು ಉಪಯೋಗವಾಗಲಿದೆ. ವೈದ್ಯಕೀಯ ಸೌಲಭ್ಯ, ಸೋಂಕಿತರ ಚಿಕಿತ್ಸೆಗೆ ಸಹಾಯವಾಗಲಿದೆ ಎಂದು ವಿಪ್ರೋ ಪ್ರಕಟನೆಯಲ್ಲಿ ತಿಳಿಸಿದೆ.
ಅಜೀಮ್ ಪ್ರೇಮ್‍ಜಿ ಫೌಂಡೇಶನ್ ವತಿಯಿಂದ 1,000 ಕೋಟಿ, ವಿಪ್ರೋ ಸಂಸ್ಥೆಯಿಂದ 100 ಕೋಟಿ ಹಾಗೂ ವಿಪ್ರೋ ಎಂಟರ್ಪ್ರೈಸಸ್ ಲಿಮಿಟೆಡ್ ವತಿಯಿಂತ 25 ಕೋಟಿ ರೂ. ಸೇರಿಸಿ ಒಟ್ಟು 1,125 ಕೋಟಿ ರೂ. ಕೊರೊನಾ ವಿರುದ್ಧ ಸಮರಕ್ಕೆ ನೀಡಲಾಗುತ್ತಿದೆ. ಈ ಮೊತ್ತವು ಅಜೀಮ್ ಪ್ರೇಮ್‍ಜಿ ಫೌಂಡೇಶನ್‍ನ ಸಾಮಾನ್ಯ ಜನೋಪಕಾರಿ ಸಮಾಜಮುಖಿ ಖರ್ಚುಗಳಲ್ಲಿ ಸೇರಿದ್ದು, ವಿಪ್ರೋದ ವಾರ್ಷಿಕ ಸಿಎಸ್‍ಆರ್ ಚಟುವಟಿಕೆಗಿಂತ ಹೆಚ್ಚುವರಿಯಾಗಿದೆ.
ಅಜೀಮ್ ಪ್ರೇಮ್‍ಜಿ ಫೌಂಡೇಶನ್ 1,600 ಮಂದಿ ತಂಡವು ದೇಶಾದ್ಯಂತ 350ಕ್ಕೂ ಹೆಚ್ಚು ಪ್ರಬಲ ನಾಗರಿಕ ಸಮಾಜದ ಪಾಲುದಾರರ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸುತ್ತದೆ ಎಂದು ವಿಪ್ರೋ ತಿಳಿಸಿದೆ.