ಬೆಂಗಳೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಸ್ರೇಲ್ ನಿಂದ ತರಿಸಿದ್ದ ಹೆಣ್ಣು ಜೀಬ್ರಾ ಮೃತಪಟ್ಟಿರುವ ಘಟನೆ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ ನಡೆದಿದೆ.
ಮರ ನೆಡಲೆಂದು ಗುಂಡಿ ತೆಗಿಸಿ ಮುಚ್ಚದೇ ಇರಿಸಿದ್ದರಿಂದ ಸೋಮವಾರ ರಾತ್ರಿ ಜೀಬ್ರಾ ಓಡಾಡುವಾಗ ಗುಂಡಿಗೆ ಹಿಮ್ಮುಖವಾಗಿ ಬಿದ್ದು, ಮೇಲೇಳಲು ಸಾಧ್ಯವಾಗದೆ ಮೃತಪಟ್ಟಿದೆ.
2015 ನವೆಂಬರ್ ನಲ್ಲಿ ಇಸ್ರೇಲ್ ನ ಜೈವಿಕ ಕೇಂದ್ರದಿಂದ ಎರಡು ಗಂಡು ಮತ್ತು ಎರಡು ಹೆಣ್ಣು ಜೀಬ್ರಾಗಳನ್ನು ತರಿಸಲಾಗಿತ್ತು. 6 ತಿಂಗಳ ಕಾಲ ಪ್ರತ್ಯೇಕವಾಗಿರಿಸಿ ನಂತರ ಪ್ರವಾಸಿಗರಿಗೆ ಜೀಬ್ರಾ ವೀಕ್ಷಿಸಲು ಅನುಮತಿ ನೀಡಲಾಗಿತ್ತು.
ಇದೀಗ ಸಾವನಪ್ಪಿದ ಜೀಬ್ರಾ ಗರ್ಭ ಧರಿಸಿತ್ತೆಂದು ಪಾರ್ಕ್‍ನ ಮೂಲಗಳಿಂದ ತಿಳಿದು ಬಂದಿದೆ. ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದು ಪ್ರಾಣಿ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.