ರಾಂಚಿ: ಸೂಕ್ತ ಸಮಯಕ್ಕೆ ಅಂಬುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗರ್ಭಿಣಿಯನ್ನು ಸುಮಾರು 10 ಕಿ.ಮೀ ವರೆಗೆ ಬೈಕ್ ನಲ್ಲಿಯೇ ಕರೆತಂದಿದ್ದಾರೆ. ಜಾರ್ಖಂಡ್ ರಾಜ್ಯದ ಚಂದ್ವಾ ಹೋಬಳಿಯಲ್ಲಿ ಈ ಘಟನೆ ನಡೆದಿದೆ.
ಗರ್ಭಿಣಿ ಶಾಂತಿ ದೇವಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡು ತೀವ್ರ ರಕ್ತಸ್ರಾವವಾಗಿತ್ತು. ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ಮೊದಲು ಚಂದ್ವಾ ಆರೋಗ್ಯ ಸಮುದಾಯ ಕೇಂದ್ರಕ್ಕೆ ಕರೆ ಮಾಡಿ ಅಂಬುಲೆನ್ಸ್ ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ, ಅಂಬುಲೆನ್ಸ್ ಸೇವೆಯಲ್ಲಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಶಾಂತಿದೇವಿ ಅವರ ಆರೋಗ್ಯ ಸ್ಥಿತಿ ಹದೆಗೆಡುತ್ತಿದ್ದಂತೆ ಭಯಬೀತರಾದ ಕುಟುಂಬಸ್ಥರು ಗ್ರಾಮದ ವ್ಯಕ್ತಿಯೊಬ್ಬರ ಬೈಕ್ ನಲ್ಲಿಯೇ ಗರ್ಭಿಣಿಯನ್ನು ಚಂದ್ವಾ ಆಸ್ಪತ್ರೆಗೆ ಕರೆತಂದಿದ್ದಾರೆ. ಮಹಿಳೆಯ ಪರಿಸ್ಥಿತಿ ನೋಡಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಲತೆಹಾರ್ ಗೆ ಕರೆದೊಯ್ಯುವಂತೆ ಸೂಚಿಸಿ ಮುಂದಿನ 27 ಕಿ.ಮೀ. ಪ್ರಯಾಣಕ್ಕೆ ಅಂಬುಲೆನ್ಸ್ ಸೇವೆ ಒದಗಿಸಿದ್ದಾರೆ. ಲತೆಹಾರ್ ನಲ್ಲಿ ತಾತ್ಕಾಲಿಕ ಚಿಕಿತ್ಸೆ ನೀಡಿ ಗರ್ಭಿಣಿಯನ್ನು ರಾಂಚಿ ರಾಜೇಂದ್ರ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಹಿಳೆ ಆರೋಗ್ಯವಾಗಿದ್ದಾರೆ.
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಶಾಂತಿದೇವಿ ಪತಿ ಕಮಲ್ ಗಂಜು, ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ 108 ನಂಬರ್ ಗೆ ಕರೆ ಮಾಡಿ ಅಂಬುಲೆನ್ಸ್ ಕಳುಹಿಸುವಂತೆ ಮನವಿ ಮಾಡಿಕೊಂಡೆ. ಆಸ್ಪತ್ರೆಯ ಸಿಬ್ಬಂದಿ ನಮ್ಮ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯನ್ನು ಕರೆತಂದಾಗ ಆಕೆಯ ದೇಹದಲ್ಲಿ ಹೀಮೋಗ್ಲೋಬಿನ್ ಪ್ರಮಾಣ ತುಂಬಾನೆ ಇಳಿಕೆಯಾಗಿತ್ತು. ಮಹಿಳೆಗೆ ಹೊಂದಿಕೆಯಾಗುವ ರಕ್ತ ನಮ್ಮ ಬ್ಲಡ್ ಬ್ಯಾಂಕ್ ನಲ್ಲಿರಲಿಲ್ಲ. ಅನಿವಾರ್ಯವಾಗಿ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ರಾಂಚಿಗೆ ಕಳುಹಿಸಲಾಯ್ತು ಎಂದು ಜಿಲ್ಲಾ ಸರ್ಜನ್ ಶಿವಪೂಜನ್ ಶರ್ಮಾ ಹೇಳಿದ್ದಾರೆ.
108 ನಂಬರ್ ಗೆ ಕರೆ ಮಾಡಿದಾಗ ಅಂಬುಲೆನ್ಸ್ ಸೇವೆ ನೀಡಿಲ್ಲ ಎಂಬುವುದು ಆಧಾರ ರಹಿತ ಆರೋಪವಾಗಿದೆ. ಒಂದು ಸಾರಿ ಕರೆ ಮಾಡಿದ್ರೆ ರೋಗಿ ಕೆಲವು ಬಾರಿ 40 ನಿಮಿಷಗಳವರೆಗ ಕಾಯಬೇಕಾಗುತ್ತದೆ. 40 ನಿಮಿಷದ ಮೇಲೆಯೂ ಅಂಬುಲೆನ್ಸ್ ಬರದೇ ಇದ್ದಲ್ಲಿ ಕ್ರಮ ತೆಗೆದುಕೊಳ್ಳಬಹುದು. ಕುಟುಂಬಸ್ಥರು ಅವಸರವಾಗಿ ಮಹಿಳೆಯನ್ನು ಬೈಕಿನಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಶಿವಪೂಜನ್ ತಿಳಿಸಿದ್ದಾರೆ.
ಘಟನೆ ಸಂಬಂಧ ಸ್ಥಳೀಯ ಸಿಪಿಎಂ ಮುಖಂಡರು ಜಿಲ್ಲಾ ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸೂಕ್ತ ತನಿಖೆ ನಡೆಸಿ ಜಿಲ್ಲಾ ಸರ್ಜನ್ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.