ಮುಂಬೈ: ಎಂಟು ತಿಂಗಳ ಗರ್ಭಿಣಿ ಮೇಲೆ ಎಂಟು ಮಂದಿ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಸಂತ್ರಸ್ತೆ ಮೂಲತಃ ಸತಾರದವರಾಗಿದ್ದು, ತನ್ನ ಪತಿ ಜೊತೆಗೆ ತಾಸ್ಗಾವ್ ಟುರ್ಚಿ ಫಾಟಾಗೆ ವ್ಯವಹಾರವೊಂದರ ಮೀಟಿಂಗ್ ಗಾಗಿ ಹೋಗಿದ್ದಾಗ ಕಾಮುಕರು ಈ ಕೃತ್ಯ ಎಸಗಿದ್ದಾರೆ ಎಂದು ತಾಸ್ಗಾವ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ವಿವರ:
ಸಂತ್ರಸ್ತೆಯ ಪತಿ ಹೋಟೆಲ್ ಉದ್ಯಮಿಯಾಗಿದ್ದರು. ಈ ದಂಪತಿ ಹೋಟೆಲಿನಲ್ಲಿ ಕೆಲಸ ಮಾಡಲು ದಂಪತಿಯನ್ನು ಹುಡುಕುತ್ತಿದ್ದರು. ಆಗ ಆರೋಪಿಗಳಲ್ಲಿ ಒಬ್ಬನಾದ ಮುಕುಂದ್ ಮಾನೆ ಇವರಿಗೆ ಕರೆ ಮಾಡಿ ಹೋಟೆಲಿನಲ್ಲಿ ಕೆಲಸ ಮಾಡಲು ದಂಪತಿ ಸಿದ್ಧರಿದ್ದಾರೆ. ಆದರೆ ಮುಂಗಡವಾಗಿ ರೂ. 20 ಸಾವಿರ ರೂ. ಅವರಿಗೆ ಕೊಡಬೇಕು. ಆದ್ದರಿಂದ ಹಣ ತೆಗೆದುಕೊಂಡು ಟುರ್ಚಿ ಫಾಟಾಗೆ ಬನ್ನಿ ಎಂದು ಹೇಳಿದ್ದಾನೆ.
ಅದರಂತೆಯೇ ದಂಪತಿ ಹಣ ತೆಗೆದುಕೊಂಡು ಆರೋಪಿ ಹೇಳಿದ ಸ್ಥಳಕ್ಕೆ ಹೋಗಿದ್ದಾರೆ. ಆದರೆ ಅಲ್ಲಿ ಆರೋಪಿ ಮಾನೆ ಮತ್ತು ಆತನ ಜನರು ಪೈಪ್ಸ್ ಮತ್ತು ದೊಣ್ಣೆಗಳನ್ನು ತಂದು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಅವರ ಬಳಿ ಇದ್ದ ಹಣ, ಚಿನ್ನದ ಆಭರಣಗನ್ನು ದೋಚಿದ್ದಾರೆ. ನಂತರ ಪತಿಯನ್ನು ಆತನ ವಾಹನದಲ್ಲಿ ಬಂಧಿಸಿ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಈ ವಿಷಯವನ್ನು ಪೊಲೀಸರಿಗೆ ಹೇಳಬಾರದು ಎಂದು ಬೆದರಿಕೆ ಒಡ್ಡಿದ್ದಾರೆ. ಆರೋಪಿಗಳು ಸ್ಥಳೀಯವಾಗಿ ಪ್ರಭಾವಿಶಾಲಿಗಳಾಗಿದ್ದರಿಂದ ಅವರನ್ನು ಯಾರು ಕೇಳುತ್ತಿರಲಿಲ್ಲ. ನಂತರ ದಂಪತಿ ತಾಸ್ಗಾವ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ಎಂಟು ಆರೋಪಿಗಳಲ್ಲಿ ಮುಕುಂದ್ ಮಾನೆ, ಸಾಗರ್, ಜಾವೇದ್ ಖಾನ್ ಮತ್ತು ವಿನೋದ್ ಎಂದು ಗುರುತಿಸಿದ್ದಾರೆ
ಈ ಘಟನೆ ನಡೆದು ಸುಮಾರು 48 ಗಂಟೆಗಳಾದರೂ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಹೀಗಾಗಿ ಪ್ರಕರಣದ ಬಗ್ಗೆ ಮಹಾರಾಷ್ಟ್ರ ರಾಜ್ಯ ಮಹಿಳಾ ಅಧ್ಯಕ್ಷೆ ವಿಜಯ ರಹಾಟ್ಕರ್ ಅವರು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದಾರೆ.