ಕೊರೊನಾ ಸೋಂಕಿನಿಂದ ಗುಣಮುಖವಾಗಿ ಗರ್ಭಿಣಿ ಡಿಸ್ಚಾರ್ಜ್

Public TV
2 Min Read
UDP DICHARGE

– ಹೂ, ಹಣ್ಣು, ಸ್ವೀಟ್ಸ್ ಕೊಟ್ಟು ಬೀಳ್ಕೊಡುಗೆ

ಉಡುಪಿ: ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳದ ಕೊರೊನಾ ಸೋಂಕಿತ ಗರ್ಭಿಣಿಯ ಡಿಸ್ಚಾರ್ಜ್ ಆಗಿದೆ. ಮಹಿಳೆಯ ಆರೋಗ್ಯದಲ್ಲಿ ಸಂಪೂರ್ಣ ಸುಧಾರಣೆಯಾಗಿದ್ದು, ಮಲ್ಲಿಗೆ ಹೂವು, ಹಣ್ಣು ಮತ್ತು ಸ್ವೀಟ್ಸ್ ಕೊಟ್ಟು ಡಿಸ್ಚಾರ್ಜ್ ಮಾಡಲಾಗಿದೆ.

ಗರ್ಭಿಣಿಯ ಎರಡು ಕೋವಿಡ್ ತಪಾಸಣೆಯಲ್ಲೂ ನೆಗೆಟಿವ್ ಎಂದು ವರದಿ ಬಂದಿದೆ. ಹೀಗಾಗಿ ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ವೈದ್ಯರು ಮತ್ತು ಜಿಲ್ಲಾಡಳಿತ ಮಹಿಳೆಯನ್ನು ವಿಶೇಷವಾಗಿ ಬೀಳ್ಕೊಟ್ಟರು. ಉಡುಪಿಯ ಶಂಕರಪುರ ಮಲ್ಲಿಗೆ, ಹಣ್ಣುಗಳು, ಸಿಹಿತಿಂಡಿಗಳನ್ನು ಕೊಟ್ಟು ಶುಭ ಹಾರೈಸಿ ಡಿಸ್ಚಾರ್ಜ್ ಮಾಡಿದರು.

UDP 13

ಆರು ತಿಂಗಳ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಮಹಿಳೆಯ ಆರೋಗ್ಯ ಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು. ಉನ್ನತ ಮಟ್ಟದ ಚಿಕಿತ್ಸೆಗೆ ಉತ್ತರ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ಸಿಎಂ ಮತ್ತು ಮುಖ್ಯ ಕಾರ್ಯದರ್ಶಿ ಸೂಚನೆಯಂತೆ ವರ್ಗಾಯಿಸಲಾಗಿತ್ತು. ಕೋವಿಡ್ ರೋಗಿಗಳ ಚಿಕಿತ್ಸೆಗೆಂದೇ ಮೀಸಲಿರುವ ಉಡುಪಿಯ ಸುಸಜ್ಜಿತ ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ಗರ್ಭಿಣಿ ಮಾತನಾಡಿ, ಆರಂಭದ ಆತಂಕವನ್ನು ಟಿಎಂಎ ಪೈ ಆಸ್ಪತ್ರೆ ವೈದ್ಯರು ದೂರ ಮಾಡಿದರು. ಮನೆಯಲ್ಲೇ ಚಿಕಿತ್ಸೆ ಪಡೆದೆ ಎಂಬ ಭಾವನೆ ಬಂತು. ಕೇಳಿದ್ದನ್ನೆಲ್ಲಾ ಕೊಟ್ಟು ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದ. ದೇವರಿಚ್ಛೆ ಇದ್ದರೆ ಹೆರಿಗೆಗೆ ಉಡುಪಿಗೆ ಬರುತ್ತೇನೆ ಎಂದು ಹೇಳಿದರು.

UDP 1 13

ಉಡುಪಿ ಜಿಲ್ಲೆ ಹೆಮ್ಮೆಪಡುವ ದಿನ ಇವತ್ತು. ಮಹಿಳೆ ಜೊತೆ ಮಗುವನ್ನೂ ಉಳಿಸಿದ ಖುಷಿಯಿದೆ. ವೈದ್ಯರ ತಂಡಕ್ಕೆ ಧನ್ಯವಾದ. ಹೊರ ಜಿಲ್ಲೆಯ ರೋಗಿಗಳಿಗೆ ಚಿಕಿತ್ಸೆ ಕೊಡುವ ಬಗ್ಗೆ ಆರಂಭದ ದಿನದಲ್ಲಿ ಒಡಂಬಡಿಕೆ ಆಗಿರಲಿಲ್ಲ. ಆದ್ರೆ ಮಾನವೀಯತೆ ವಿಚಾರ ಬಂದಾಗ ತಾಂತ್ರಿಕ ಸಮಸ್ಯೆಗಳನ್ನು ಬದಿಗೆ ತಳ್ಳಿದೆವು ಎಂದು ಡಿಸಿ ಜಿ.ಜಗದೀಶ್ ಹೇಳಿದರು.

ಆರಂಭಿಕ ಹಂತದಲ್ಲಿ ಇದೊಂದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದು, ನಿರಂತರ ಚಿಕಿತ್ಸೆಯ ನಂತರ 26 ವರ್ಷದ ಈ ಗರ್ಭಿಣಿ ಆರೋಗ್ಯ ಸುಧಾರಣೆ ಕಂಡಿದೆ. ಎರಡು ಬಾರಿ ಗಂಟಲ ದ್ರವ ಪರೀಕ್ಷೆಯಲ್ಲೂ ವರದಿ ನೆಗೆಟಿವ್ ಬಂದಿದೆ ಎಂದು ಡಿಎಚ್‍ಒ ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

UDP 2 8

ಉಡುಪಿ ಜಿಲ್ಲೆಯ ಮೂವರು ಕೊರೊನಾ ಸೋಂಕಿತರು ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಪಕ್ಕದ ಜಿಲ್ಲೆಯ ಮಹಿಳೆಯೂ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಕಳೆದ 27 ದಿನಗಳಿಂದ ಯಾವುದೇ ಹೊಸ ಪಾಸಿಟಿವ್ ಪ್ರಕರಣ  ಪತ್ತೆಯಾಗಿಲ್ಲ ಎಂದು ಟಿಎಂಎ ಪೈ ಕೋವಿಡ್ ಆಸ್ಪತ್ರೆ ವೈದ್ಯ ಶಶಿಕಿರಣ್ ಮತ್ತು ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *