DistrictsHassanKarnatakaLatestMain Post

ಹಾಸನದಲ್ಲಿ ನಾನೇ ಸಿಎಂ, ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ: ಪ್ರೀತಂಗೌಡ

ಹಾಸನ: ಹಾಸನದಲ್ಲಿ ನಾನೇ ಸಿಎಂ, ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಶಾಸಕ ಪ್ರೀತಂ ಜೆ ಗೌಡ ಹೇಳಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಚರ್ಚೆ ನಡೆಯುತ್ತಿದ್ದು ಕೇಂದ್ರದ ಹಾಗೂ ರಾಜ್ಯದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ಇದೆ. ಆದರೆ ನಾನು ಸದ್ಯ ಸಚಿವ ಸ್ಥಾನದ ರೇಸ್ ನಲ್ಲಿ ಇಲ್ಲ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಹ ನನಗೆ ನಿಗಮ ಮಂಡಳಿಯ ಸ್ಥಾನವನ್ನು ನೀಡಲಾಗಿತ್ತು. ಅದನ್ನು ನಾನು ತಿರಸ್ಕರಿಸಿ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದು ಅದರಂತೆ ಸರ್ಕಾರ ನಡೆದುಕೊಂಡಿದೆ. ಯಡಿಯೂರಪ್ಪ ಹಾಗೂ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಸನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುತ್ತಿದ್ದಾರೆ ಎಂದರು.

ಮುಂದಿನ 2022 ರಾಜ್ಯ ಬಜೆಟ್‍ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಯೋಜನೆಗಳ ನಿರೀಕ್ಷೆಯಲ್ಲಿದ್ದು ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಈ ಸಂಬಂಧ ಮಾತುಕತೆ ನಡೆಸಿರುವುದಾಗಿ ಹಾಗೂ ಸಕಾರಾತ್ಮಕ ಪ್ರತಿಕ್ರಿಯೆ ಅವರಿಂದ ವ್ಯಕ್ತವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ವ್ಯಾಯಾಮ ಮಾಡಿದ್ದು ಸಾಕು ಎಂದಿದಕ್ಕೆ ತಾಯಿಯನ್ನೇ ಕೊಲೆಗೈದ ಮಗ

ಹಾಸನದಲ್ಲಿ ನಾನೇ ಸಿಎಂ: ಹಾಸನದಲ್ಲಿ ಸದ್ಯ ನಾನೇ ಸಿಎಂ ಆದ್ದರಿಂದ ಸಚಿವ ಸ್ಥಾನದ ಬಗ್ಗೆ ಯಾವುದೇ ಆಸೆಯನ್ನು ಇಟ್ಟುಕೊಂಡಿಲ್ಲ ಮೊದಲನೇ ಬಾರಿ ಶಾಸಕನಾಗಿ ಹಾಸನದಲ್ಲಿ ಅಧಿಕಾರದಲ್ಲಿದ್ದು ಕ್ಷೇತ್ರದ ಅಭಿವೃದ್ಧಿ ಹಾಗೂ ಮುಂದಿನ ಚುನಾವಣೆ ಬಗ್ಗೆ ಹೆಚ್ಚು ಗಮನ ಹರಿಸುವುದಾಗಿ ಹೇಳಿದರು.

ಬಿಜೆಪಿ ಶಾಸಕರು ಪಕ್ಷಾಂತರ ವಿಚಾರ: ನಾನಿನ್ನು ಪ್ರಬುದ್ಧನಾಗಿಲ್ಲ. ಮೊದಲ ಬಾರಿ ಶಾಸಕನಾಗಿ ನಾನು ಅಧಿಕಾರ ನಡೆಸುತ್ತಿದ್ದು, ಕಾಂಗ್ರೆಸ್‍ನಿಂದ ಬಂದವರು ಈಗಾಗಲೇ ನಮ್ಮ ಪಕ್ಷದಲ್ಲಿ ಮಂತ್ರಿಗಳಾಗಿ ಅಧಿಕಾರ ನಡೆಸುತ್ತಿದ್ದಾರೆ. ಬಿಜೆಪಿ ಶಾಸಕರು ಪಕ್ಷಾಂತರ ಮಾಡುತ್ತಾರೆ ಎಂಬುದು ಕೇವಲ ಊಹಾಪೋಹವಷ್ಟೇ ಎಂದರು. ಇದನ್ನೂ ಓದಿ: ನಮಗೆ ಗೌರವ ಕೊಟ್ಟಿದ್ದಕ್ಕೆ ಜಾರಕಿಹೊಳಿಗೆ ಅಭಿನಂದನೆ: ಎಚ್‍ಡಿಕೆ

ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೆ: ನಾನು ಬಿಜೆಪಿಯಲ್ಲಿ ಸ್ವಯಂ ಸೇವಕನಾಗಿ ನಂತರ ಕಾರ್ಯಕರ್ತನಾಗಿ ಶಾಸಕನಾಗಿ ಅಧಿಕಾರ ಹಿಡಿದಿದ್ದೇನೆ. ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಹೊರತು, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮಾತನಾಡುವವರು ಕೇವಲ ಬಾಯಿ ಚಪಲ ತೀರಿಸಿಕೊಳ್ಳಬೇಕು ಅಷ್ಟೇ . ಇದೆಲ್ಲ ಊಹಾಪೋಹ ಹಾಗೂ ಭ್ರಮೆಯ ಮಾತುಗಳಾಗಿವೆ. ನನ್ನ ಮಾತೃಪಕ್ಷ ಬಿಜೆಪಿಯನ್ನು ಬಿಟ್ಟು ಬೇರೆ ಪಕ್ಷ ಸೇರುವ ಯಾವುದೇ ಆಸಕ್ತಿ ನನಗಿಲ್ಲ ಎಂದು ಸ್ಪಷ್ಟಪಡಿಸಿದರು.

ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರೀತಂ ಗೌಡ ರಾಜಕೀಯವಾಗಿ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ಯಾವುದೇ ಅಪಪ್ರಚಾರ ಬೇಡ. ಇವೆಲ್ಲಾ ಕೇವಲ ಊಹಾಪೋಹವಾಗಿದ್ದು ನಾನು ಒಂದಲ್ಲ, ಡಿಕೆಶಿ ಅವರೊಂದಿಗೆ ನೂರು ಸುತ್ತಿನ ಮಾತುಕತೆ ನಡೆದರೂ ಸಹ ಪ್ರೀತಂ ಗೌಡ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮೋಹನ್, ಬಿಜೆಪಿ ಮುಖಂಡರಾದ ಮಳಲಿ ಶರತ್ ಸೇರಿದಂತೆ ಇತರರು ಹಾಜರಿದ್ದರು. ಇದನ್ನೂ ಓದಿ: ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ: ರಮೇಶ್ ಜಾರಕಿಹೊಳಿ

Leave a Reply

Your email address will not be published.

Back to top button