ಮಂಗಳೂರು: ಮಂಗಳವಾರ ರಾತ್ರಿ ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ದುಷ್ಕರ್ಮಿಗಳ ಕೈಯಲ್ಲಿ ಭೀಕರವಾಗಿ ಹತ್ಯೆಯಾಗಿದ್ದು, ಈ ಹಿನ್ನೆಲೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಪ್ರವೀಣ್ ಹತ್ಯೆ ಹಿನ್ನೆಲೆ ಸುಳ್ಯದ ಬೆಳ್ಳಾರೆಯಲ್ಲಿ ಮಾಹಿತಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ಹತ್ಯೆಯ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಯುತ್ತಿದೆ. ಮಂಗಳೂರು ಕಮಿಷನರ್ ಉಡುಪಿ ಪೊಲೀಸರ ಸಹಾಯ ಪಡೆದು 6 ತಂಡಗಳನ್ನು ರಚನೆ ಮಾಡಿದ್ದೇವೆ. ಈಗಾಗಲೇ 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಘಟನೆಯ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ನಿನ್ನೆಯಿಂದ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನಿನ್ನೆ ಮತ್ತು ಇಂದು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪತಿಯ ಕಾರ್ಯ ಮುಗಿಯುವುದರೊಳಗೆ ಆರೋಪಿಗಳಿಗೆ ಶಿಕ್ಷೆ ಆಗ್ಬೇಕು: ಪ್ರವೀಣ್ ಪತ್ನಿ ನೂತನಾ
ಇಂದು ಪ್ರವೀಣ್ ಅಂತಿಮ ದರ್ಶನಕ್ಕೆ ಸಂಸದರು ಹಾಗೂ ಸಚಿವರು ಸ್ಥಳಕ್ಕೆ ಬಂದಿದ್ದಾಗ ಜನರು ಭಾವಾವೇಶದಿಂದ ವಾಹನವನ್ನು ತಳ್ಳಲು ಪ್ರಯತ್ನ ಮಾಡಿದ್ದಾರೆ. ನಾವು ಪರಿಸ್ಥಿತಿಯನ್ನು ಹತೋಟಿಗೆ ತರಲು ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ಇದೀಗ ಜಿಲ್ಲಾಧಿಕಾರಿಗಳು ಸೆಕ್ಷನ್ 144 ಜಾರಿ ಮಾಡಿದ್ದು, ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಘಟನೆಯ ಆರೋಪಿಗಳ ಪತ್ತೆಗೆ ಪೊಲೀಸ್ ಅಧಿಕಾರಿಗಳಿಗೆ ಜನರು ಅವಕಾಶ ಮಾಡಿ ಕೊಡಬೇಕು. ಹತ್ಯೆಗೆ 2-3 ಕಾರಣಗಳು ಮೇಲ್ನೋಟಕ್ಕೆ ಕಂಡುಬರುತ್ತಿವೆ. ವಶಕ್ಕೆ ಪಡೆದವರಲ್ಲಿ ಕೊಲೆಗಡುಕರು ಇದ್ದಾರೆಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆರೋಪಿಗಳನ್ನು ದಸ್ತಗಿರಿ ಮಾಡಿದ ಮೇಲೆಯೇ ಹತ್ಯೆಗೆ ಕಾರಣವನ್ನು ತಿಳಿಸಬಹುದು. ಘಟನಾ ಪ್ರದೇಶದಲ್ಲಿ ಜರ‍್ಯಾರೂ ಗುಂಪು ಕಟ್ಟಿ ಓಡಾಡಬಾರದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹತ್ಯೆಯ ದಿನವೇ ಮುಸ್ಲಿಂ ಸ್ನೇಹಿತನ ಗೃಹಪ್ರವೇಶಕ್ಕೆ ಹೋಗಿದ್ದ ಪ್ರವೀಣ್ ನೆಟ್ಟಾರ್!