ಬೆಂಗಳೂರು: ಸಂಸದ ಪ್ರತಾಪ್ ಸಿಂಹ ಅವರು ಸಚಿವ ಡಿಕೆ ಶಿವಕುಮಾರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಅಚ್ಚರಿ ಮೂಡಿಸಿದ್ದಾರೆ.
ಹೌದು. ಇಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು 88ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಸಚಿವರು ಸದಾಶಿವನಗರದಲ್ಲಿರುವ ಎಸ್‍ಎಂಕೆ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಡಿಕೆಶಿ ಅವರು ಎಸ್‍ಎಂಕೆ ನಿವಾಸದತ್ತ ಬರುತ್ತಿದ್ದಂತೆಯೇ ಸಂಸದ ಪ್ರತಾಪ್ ಸಿಂಹ, ಶಿವಕುಮಾರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಡಿಕೆ ಶಿವಕುಮಾರ್ ಅವರು ಹಿರಿಯ ನಾಯಕರು. ಹಿರಿಯರ ಕಾಲಿಗೆ ಅಡ್ಡ ಬಿದ್ದರೆ ತಪ್ಪು ಏನಿಲ್ಲ ಎಂದು ಪ್ರತಾಪ್ ಸಿಂಹರ ಬೆಂಬಲಿಗರು ಹೇಳಿದ್ದರೂ ರಾಜಕೀಯದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಲೋಕಸಭಾ ಚುನಾವಣೆಯ ಸಮಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮೈಸೂರಿನಿಂದ ವಿಜಯ್ ಶಂಕರ್ ಕಣಕ್ಕೆ ಇಳಿದಿದ್ದರು. ಈ ವೇಳೆ ಸಿದ್ದರಾಮಯ್ಯನವರು ಭರ್ಜರಿಯಾಗಿ ಪ್ರಚಾರ ನಡೆಸಿದ್ದರೆ ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಮೈಸೂರಿನತ್ತ ತಲೆ ಹಾಕಿರಲಿಲ್ಲ. ಈ ವಿಚಾರ ಈಗಲೂ ಚರ್ಚೆ ಆಗುತ್ತಿದೆ. ಈ ಚರ್ಚೆಯ ನಡುವೆಯೇ ಪ್ರತಾಪ್ ಸಿಂಹ, ಡಿಕೆಶಿ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಅಚ್ಚರಿಯ ಸಂಗತಿಯಾಗಿದೆ.