– ನಕಲಿ ಪತ್ರ ಸೃಷ್ಟಿಸಿದ್ದವರನ್ನ ಬಿಟ್ಟು ವೈರಲ್ ಮಾಡಿದವರ ಬಂಧನ ಖಂಡನೀಯ
– ಶೀಘ್ರವೇ ಬಿಜೆಪಿ ಯುವ ಮೋರ್ಚಾದಿಂದ ಹೋರಾಟ
ಬೆಂಗಳೂರು: ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಸಚಿವಾಲಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆ ಎಂ.ಬಿ.ಪಾಟೀಲ್ ಭದ್ರತೆಗೆ ಇದೆಯೋ? ಸಾರ್ವಜನಿಕರ ರಕ್ಷಣೆ ಇದೆಯೋ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ನಗರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದರು, ಎಂ.ಬಿ.ಪಾಟೀಲ್ ಅವರ ನಕಲಿ ಪತ್ರ ವೈರಲ್ ಪ್ರಕರಣದಲ್ಲಿ ಮಹೇಶ್ ವಿಕ್ರಮ್ ಹೆಗಡೆ, ಹೇಮಂತ್ ಕುಮಾರ್ ಹಾಗೂ ಶೃತಿ ಬಂಧನವಾಗಿದೆ. ಆದರೆ ಈ ಹಿಂದೆ ಪ್ರಭಾ ಬೆಳವಂಗಲ ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಅಪಪ್ರಚಾರ ಮಾಡಿದ್ದಾಗ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಪ್ರೊ. ಭಗವಾನ್ ಅವರು ಹಿಂದೂ ಧರ್ಮದ ಕುರಿತು ಹಗುರವಾಗಿ ಮಾತನಾಡಿದಾಗ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಇವರ ವಿರುದ್ಧ ದೂರು ನೀಡಿದ್ದರು ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
Advertisement
Advertisement
ಸಚಿವರ ನಡೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಹೋರಾಟ ನಡೆಸಲಿದೆ. ಶೀಘ್ರದಲ್ಲೇ ಹೋರಾಟದ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ. ಬೇಳೂರು ಗೋಪಾಲ ಕೃಷ್ಣ, ರೋಷನ್ ಬೇಗ್ ವಿರುದ್ಧವೂ ಕ್ರಮಕೈಗೊಳ್ಳಿ ಎಂದು ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದರು.
Advertisement
ನಕಲಿ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎಂಬ ಕಾರಣಕ್ಕೆ ಕಳೆದ ನಾಲ್ಕೈದು ದಿನಗಳಿಂದ ಅನೇಕರನ್ನು ಬಂಧಿಸಲಾಗಿದೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಒಂದು ವರ್ಷದ ಹಿಂದಿನ ಯಾವುದೋ ಪತ್ರ ಇಟ್ಟುಕೊಂಡು ಪ್ರಕರಣ ದಾಖಲಿಸಿದ್ದಾರೆ. ಇದನ್ನು ನೋಡಿದರೆ ಹಲವು ಬಲವಾದ ಅನುಮಾನಗಳು ಶುರುವಾಗಿದೆ. ಎಂ.ಬಿ.ಪಾಟೀಲ್ ಅವರು ಬರೆದಿದ್ದಾರೆ ಎನ್ನಲಾದ ಪತ್ರ ನಕಲಿಯಾಗಿದ್ದರೆ ಅದನ್ನು ಸೃಷ್ಟಿ ಮಾಡಿದವರು ಯಾರು ಎಂದು ಪತ್ತೆ ಹಚ್ಚಬೇಕು. ಅದನ್ನು ಬಿಟ್ಟು ಯಾಕೆ ಪೋಸ್ಟ್ ಮಾಡಿದವರನ್ನು ಬಂಧಿಸುತ್ತಿದ್ದಾರೆ ಅಂತ ಗೊತ್ತಾಗುತ್ತಿಲ್ಲ. ಸಚಿವರು ಆಳಕ್ಕೆ ಇಳಿದು ಆರೋಪಿಗಳನ್ನು ಹುಡುಕಲಿ ಎಂದು ಹೇಳಿದರು.
Advertisement
ಏನಿದು ಪ್ರಕರಣ?:
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನುವ ರೀತಿಯಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಬಳಿಕ ಈ ಪತ್ರವು ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪತ್ರವನ್ನು ನಾನು ಬರೆದಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿ ಸಚಿವರು ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಈ ಪತ್ರವನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡವರ ವಿರುದ್ಧ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗುತ್ತಿದೆ.