ಮೈಸೂರು: ರಾಮನಗರ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಸೋಲುವ ಭಯದಿಂದ ಬಿಜೆಪಿ ಅಭ್ಯರ್ಥಿಯನ್ನು ಹಣದ ಬಲದಿಂದ ಹೈಜಾಕ್ ಮಾಡಿದೆ. ಎಲ್ ಚಂದ್ರಶೇಖರ್ ಅವರನ್ನು ಬ್ಲಾಕ್‍ಮೇಲ್ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ರಾಮನಗರ ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಹಿಂದೆ ಸರಿದ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ, ಉಪಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳು ರಣಹೇಡಿತನವನ್ನು ಪ್ರದರ್ಶಿಸಿದ್ದಾರೆ. ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲುವ ಭಯ ಇತ್ತು. ಇದರಿಂದ ತಪ್ಪಿಸಿಕೊಳ್ಳಲು ನಮ್ಮ ಅಭ್ಯರ್ಥಿಯನ್ನ ಹೈಜಾಕ್ ಮಾಡಿದ್ದಾರೆ. ಈ ಮೂಲಕ ಎರಡು ಪಕ್ಷಗಳು ತಮ್ಮ ಪುಕ್ಕಲುತನ ತೋರಿಸಿವೆ ಎಂದು ಕಿಡಿಕಾರಿದರು.
Advertisement
Advertisement
ಎರಡು ಪಕ್ಷಗಳಿಗೆ ಚುನಾವಣೆ ಗೆಲ್ಲುವ ತಾಕತ್ತು ಇಲ್ಲ. ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನಿಜವಾಗಿಯೂ ರಾಜಕೀಯ ರಣತಂತ್ರ ಮಾಡುವ ರಾಜಕಾರಣಿ ಅಲ್ಲ. ಅವರು ಏನಿದ್ದರೂ ಹಣದ ರಾಜಕೀಯವನ್ನಷ್ಟೇ ಮಾಡುತ್ತಾರೆ ಅಷ್ಟೇ. ಆದರೆ ಇಂತಹ ಸಂದರ್ಭಗಳಿಂದ ಬಿಜೆಪಿ ಪಾಠ ಕಲಿಯಬೇಕಿಲ್ಲ. ಇದರಿಂದ ನಮ್ಮ ಶಕ್ತಿ ಏನಂತ ಗೊತ್ತಾಗಿದೆ. ರಾಮನಗರದಲ್ಲಿ ಬಿಜೆಪಿ ಗೆದ್ದ ಇತಿಹಾಸ ಇಲ್ಲ. ಆದರೆ ಮುಖ್ಯಮಂತ್ರಿ ಪತ್ನಿಯೇ ಅಭ್ಯರ್ಥಿ ಆಗಿದ್ದರೂ ಈ ಬಾರಿ ಗೆಲ್ಲುವ ವಾತಾವರಣ ಇತ್ತು. ಅದಕ್ಕೆ ಹೆದರಿ ಎರಡು ಪಕ್ಷಗಳು ಪುಕ್ಕಲುತನದಿಂದ ಬಿಜೆಪಿ ಅಭ್ಯರ್ಥಿಯನ್ನೆ ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಿದರು.
Advertisement
ಒಂದೊಮ್ಮೆ ಅವರು ಗೆಲ್ಲುವ ವಿಶ್ವಾಸ ಇದ್ದರೆ ಧೈರ್ಯವಾಗಿ ಚುನಾವಣೆ ಎದುರಿಸಬೇಕಿತ್ತು. ಆದರೆ ಚಂದ್ರಶೇಖರ್ ಅವರನ್ನು ಬ್ಲಾಕ್ ಮೇಲ್ ಮಾಡಿದ್ದಾರೆ. ಅವರು ಭಯದಿಂದ ಆತ್ಮ ದ್ರೋಹದ ಕೆಲಸ ಮಾಡಿದ್ದಾರೆ. ಪ್ರಚಾರ ಬಂದಿಲ್ಲ ಎಂಬುವುದು ಒಂದು ನೆಪ ಅಷ್ಟೇ. ಉಪಚುನಾವಣೆಯಲ್ಲಿ ಜಮಖಂಡಿ ಸೇರಿದಂತೆ ಲೋಕಸಭಾ ಸ್ಥಾನಗಳಾದ ಶಿವಮೊಗ್ಗ, ಮಂಡ್ಯ, ಬಳ್ಳಾರಿಯಲ್ಲಿ ಪಕ್ಷ ಜಯಗಳಿಸುತ್ತದೆ. ಅಲ್ಲದೇ ಮುಂದಿನ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಹೆಚ್ಚಿನ ಸ್ಥಾನ ಗೆಲ್ಲುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv