ಮೈಸೂರು: ಜಿಲ್ಲೆಯ ಹುಣಸೂರು ನಗರಸಭೆ ಜೆಡಿಎಸ್ ತೆಕ್ಕೆಗೆ ಸೇರಿದ್ದು, ಕಾಂಗ್ರೆಸ್‍ನಿಂದ ಜೆಡಿಎಸ್‍ಗೆ ವಲಸೆ ಹೋಗಿದ್ದ ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿ ಗೆಲುವಿಗೆ ಕಾರಣರಾದರು.
ನಗರಸಭೆ ಸಭಾಂಗಣದಲ್ಲಿ ಹಿಂದಿನ ಅಧ್ಯಕ್ಷ ಲಕ್ಷ್ಮಣ್ ಅವರ ಪದಚ್ಯುತಿಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಂಸದ ಪ್ರತಾಪ್ ಸಿಂಹ ಅವರು ಚುನಾವಣೆಯಲ್ಲಿ ಭಾಗಿಯಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಮತ ನೀಡಿದ್ದರಿಂದ 15 ಮತ ಪಡೆದ ಶಿವಕುಮಾರ್ ಗೆಲುವು ಸಾಧಿಸಿದರು.
Advertisement
Advertisement
ಹುಣಸೂರು ನಗರಸಭೆಯಲ್ಲಿ 15 ಕಾಂಗ್ರೆಸ್, 9 ಜೆಡಿಎಸ್, 3 ಪಕ್ಷೇತರ ಸದಸ್ಯರು, ಒಬ್ಬರು ಶಾಸಕರು ಹಾಗೂ ಲೋಕಸಭಾ ಸದಸ್ಯರು ಸೇರಿ ಒಟ್ಟು 29 ಸಂಖ್ಯಾಬಲ ಹೊಂದಿತ್ತು. ಕಾಂಗ್ರೆಸ್ ನ ಮೊದಲ ವಾರ್ಡ್ ಸದಸ್ಯ ಶಿವಕುಮಾರ್ ಹಾಗೂ 5ನೇ ವಾರ್ಡ್ ಶಿವರಾಜು, 3ನೇ ವಾರ್ಡ್‍ನ ಮಂಜುಳಾ, 9ನೇ ವಾರ್ಡ್ ಸುನೀತಾ, 10ನೇ ವಾರ್ಡ್‍ನ ಯೋಗಾನಂದ, 18 ವಾರ್ಡ್‍ನ ರವಿಕುಮಾರ್ ಜೆಡಿಎಸ್ ಗೆ ವಲಸೆ ಬಂದಿದ್ದರು.
Advertisement
ಸಂಸದರ ವೋಟಿನಿಂದ ಜಯ: ಒಟ್ಟು 29 ಸದಸ್ಯ ಬಲದ ನಗರಸಭೆ ಚುನಾವಣೆಯಲ್ಲಿ ಎರಡೂ ಕಡೆಯೂ ತಲಾ 14 ಸದಸ್ಯರಿದ್ದರು. ಒಂದು ವೇಳೆ ಸಂಸದರು ಭಾಗವಹಿಸದೇ ಇದ್ದಲ್ಲಿ ಲಾಟರಿ ಎತ್ತುವ ಮೂಲಕ ಆಯ್ಕೆ ನಡೆಯಬೇಕಿತ್ತು. ಈ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ಭಾಗವಹಿಸಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶಿವಕುಮಾರ್ ಪರ ವೋಟು ಚಲಾಯಿಸಿದರು.
Advertisement
ಸದಸ್ಯರು ಕೈ ಎತ್ತುವ ಮೂಲಕ ಮತದಾನ ಮಾಡಿದರು. ಶಿವಕುಮಾರ್ ವಿಜೇತರಾಗಿದ್ದಾರೆಂದು ಚುನಾವಣಾಧಿಕಾರಿಯಾದ ಉಪ ವಿಭಾಗಾಧಿಕಾರಿ ಕೆ.ನಿತಿನ್ ಘೋಷಿಸಿದರು. ಈ ಮೂಲಕ ಬಹುಮತವಿದ್ದರೂ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡಿದೆ.
ಮತಹಾಕಿದ್ದಕ್ಕೆ ಪ್ರತಾಪ್ ಸಿಂಹ ಫೇಸ್‍ಬುಕ್‍ನಲ್ಲಿ ಸ್ಪಷ್ಟನೆ:
ಮೈಸೂರಿನಲ್ಲಿ ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ವಿವಿಧ ಪುರಸಭೆ ಹಾಗು ನಗರಸಭೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿದೆ. ಹಾಗಾಗಿ ನಮಗೆ 3 ಸಲ ಉಪಮೇಯರ್, ಕೆಲ ಕಡೆ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ, ಸ್ಥಾಯಿ ಸಮಿತಿ ಸಿಕ್ಕಿದೆ. ಹುಣಸೂರಿನಲ್ಲಿ ಪಕ್ಷಾಂತರದ ಪಿಡುಗು ಹೆಚ್ಚಿದ್ದು ಕಳೆದ ಒಂದೂವರೆ ವರ್ಷದಲ್ಲಿ ಎರಡು ಬಾರಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಎರಡು ಸಲವೂ ಮೈತ್ರಿಕೂಟದ ಪರವಾಗಿ ವೋಟು ಹಾಕಿದ್ದೇನೆ.
ಈ ಬಾರಿ ಜೆಡಿಎಸ್ ಬಣದ ಪರವಾಗಿ ನಿಂತ ಶಿವಕುಮಾರ್ ಹಾಗು ಕಾಂಗ್ರೆಸ್ ಬಣದ ಅಭ್ಯರ್ಥಿ ಸೌರಭ ಸಿದ್ದರಾಜು ಇಬ್ಬರೂ ಕಾಂಗ್ರೆಸ್ಸಿಗರೇ! ಈ ಕಾಂಗ್ರೆಸ್ ಅಭ್ಯರ್ಥಿ ಕಡೆಯವರು ನಮ್ಮ ಹನುಮ ಭಕ್ತರರಿಗೆ ಎಂಥ ಉಪದ್ರವ ಕೊಟ್ಟಿದ್ದರು ಎಂಬುದು ಹುಣಸೂರಿಗೆ ಗೊತ್ತು. ಹಾಗಾಗಿ ಕುಷ್ಟಗಿಯಿಂದ ರಾತ್ರಿ ಹೊರಟು ಬೆಳಗಿನ ಜಾವ ಕಸಾಯಿಖಾನೆಗೆ ತೆರಳುತ್ತಿದ್ದ 16 ಪಶುಗಳನ್ನು ನಮ್ಮ ಯುವಮೋರ್ಚಾದ ಶೇಖರ್, ದರ್ಶನ, ಡ್ರೈವರ್ ಸಹಾಯದಿಂದ ರಕ್ಷಿಸಿ ನೇರವಾಗಿ ಹುಣಸೂರಿಗೆ ಬಂದು ಹನುಮಭಕ್ತರ ವಿರೋಧಿಗಳಿಗೆ ವೋಟಿನ ಮೂಲಕ ಪಾಠ ಕಳಿಸಿ ಹೊರಬಂದಾಗ, “ಪ್ರತಾಪ್ ಸಿಂಹನಿಗೆ ಜೈ” ಎಂಬ ಘೋಷಣೆ ಮೊಳಗಿತು. ಮುಂದೆ ಬರುತ್ತಿರುವಾಗ ಮಾಜಿ ಸಂಸದ ವಿಶ್ವನಾಥರು ಎದುರಾದರು, ಕಾಲು ಮುಟ್ಟಿ ಸಮಸ್ಕರಿಸಿದೆ (ಸಂಘದ ಸಂಸ್ಕಾರ). ನನ್ನನ್ನು ತಬ್ಬಿಕೊಂಡರು. ಆ ಫೋಟೋ ಹಾಕಿ ಇಲ್ಲದ ಗುಲ್ಲೆಬ್ಬಿಸಬೇಡಿ. ಮೋದಿಜಿಯನ್ನು ಹೊಗಳಿ, ಸತತವಾಗಿ ಅವರ ಪರವಾಗಿ ಬರೆದ (2004, ಜೂನ್ 19 ರಿಂದ) ಮೊದಲ ಕನ್ನಡ ಬರಹಗಾರ ಹಾಗು ಮೋದಿಜಿ ಆತ್ಮಚರಿತ್ರೆ ಬರೆದ ಮೊಟ್ಟಮೊದಲ ಲೇಖಕ ನಾನು. ಸಾಯುವವರೆಗೂ ನಾನು ಮೋದಿಜಿ ನಿಷ್ಠ. ಜನವರಿ 27ಕ್ಕೆ ಹನುಮ ಜಯಂತಿ ಮೆರವಣಿಗೆ ಇದೆ. ಬಂದು ಕಣ್ಣಾರೆ ಕಂಡು ಆನಂದಿಸಿರಂತೆ. ವದಂತಿ ಬಿಡಿ.