ಕಾರವಾರ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮುಖ್ಯಮಂತ್ರಿ ಮಾಡಲಿ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆ ನಂತರ ಈಡಿಗ ಸಮುದಾಯದವರೇ ಮುಖ್ಯಮಂತ್ರಿ ಆಗುತ್ತಾರೆ. ಬಿಜೆಪಿಯೂ ಹಿಂದುತ್ವವಾದಿ ಎಂದು ಹೇಳಿ ಜಾತಿ ಜಾತಿಗಳ ನಡುವೆ ಜಗಳ ಹುಟ್ಟುಹಾಕಲು ಹೊರಟಿದೆ. ಚಿಕ್ಕ ಸಮುದಾಯಕ್ಕೆ ನಿಗಮ ಮಂಡಳಿಯನ್ನು ಘೋಷಣೆ ಮಾಡುವ ಸರ್ಕಾರ ದೊಡ್ಡ ಸಮಾಜವಾದ ಆರ್ಯ ಈಡಿಗರ ಸಮುದಾಯಕ್ಕೆ ನಿಗಮ ಮಂಡಳಿಯನ್ನು ಘೋಷಣೆ ಮಾಡಿಲ್ಲ ಎಂದು ಕಿಡಿಕಾರಿದರು.
ಆರ್ಯ ಈಡಿಗ ಸಮಾಜಕ್ಕೆ ನಿಗಮ ಮಂಡಳಿ ಘೋಷಣೆ ಮಾಡಿ, 500 ಕೋಟಿ ರೂ. ಬಿಡುಗಡೆ ಮಾಡಬೇಕು. ಈಡಿಗ ಸಮಾಜದ ಕುಲಕಸಬು ಶೇಂದಿ ಇಳಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಯಚೂರು ಕೋರ್ಟ್ ಮುಂದೆ ಜನಜಂಗುಳಿ
ದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕೇರಳ ರಾಜ್ಯ ಸರ್ಕಾರ ನಾರಾಯಣ ಗುರುಗಳ ಸ್ತಬ್ಧ ಚಿತ್ರ (ಟ್ಯಾಬ್ಲೋ) ಪ್ರದರ್ಶನಕ್ಕೆ ಅವಕಾಶ ಕೋರಿದರೂ, ಅದರ ಬದಲು ಆದಿ ಶಂಕರಾಚಾರ್ಯರ ಟ್ಯಾಬ್ಲೋ ಮಾಡುವಂತೆ ಸೂಚಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಈಡಿಗ ಸಮುದಾಯವನ್ನು ಅಪಮಾನ ಮಾಡುತ್ತಿದೆ ಎಂದರು. ಇದನ್ನೂ ಓದಿ: ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!