– 10.575 ಕಿಮೀ ರಸ್ತೆ ನಿರ್ಮಾಣಕ್ಕೆ ಕೇಂದ್ರದಿಂದ ಅನುಮೋದನೆ – ಶೀಘ್ರವೇ ಟೆಂಡರ್ ಪ್ರತಿಕ್ರಿಯೆ ಶುರು
ಹುಬ್ಬಳ್ಳಿ: ಸವದತ್ತಿ ಯಲ್ಲಮ್ಮನಗುಡ್ಡ ಸೇರಿದಂತೆ ವಿವಿಧ ಸುಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ 327 ಕೋಟಿ ರೂ. ವೆಚ್ಚದ ನವಲಗುಂದ ಬೈಪಾಸ್ ರಸ್ತೆ (Navalgund Bypass Road) ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.
ನವಲಗುಂದ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಈ ಹಿಂದೆಯೇ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಇದೀಗ ಕಾಮಗಾರಿಗೆ ಅನುಮೋದನೆ ದೊರಕಿದೆ. ರಾಜ್ಯ ಸರ್ಕಾರ ಟೆಂಡರ್ ಕರೆದು ಕಾರ್ಯಾರಂಭ ಮಾಡುವ ಹಂತ ತಲುಪಿದೆ ಎಂದು ತಿಳಿಸಿದ್ದಾರೆ.
ಈ ಬೈಪಾಸ್ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಸಲ್ಲಿಸಿದ್ದ ಜೋಡಣೆ (Alignment) ಮತ್ತು DPR (ವಿವರವಾದ ಯೋಜನಾ ವರದಿ) ಅನ್ನು ಅಲೈನ್‌ಮೆಂಟ್ ಅಪ್ರೂವಲ್ ಕಮಿಟಿ (Alignment Approval Committee (AAC) ಅನುಮೋದನೆ ನೀಡಿದೆ. ನವಲಗುಂದ ಪಟ್ಟಣಕ್ಕೆ 10.575 ಕಿ.ಮೀ. ವಿಸ್ತೀರ್ಣದ ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.
ಬೆಣ್ಣೆಹಳ್ಳ ಮತ್ತು ಅದನ್ನು ಸೇರುವ ಸಣ್ಣ ನಾಲಾಗಳು ಮಳೆಗಾಲದಲ್ಲಿ ತುಂಬಿ ಹರಿದು ಪ್ರವಾಹ ಪರಿಸ್ಥಿತಿ ಎದುರಾಗುತ್ತಿತ್ತು. ಇದರಿಂದ ಅಪಾರ ಕೃಷಿ ಭೂಮಿಯಲ್ಲಿ ಬೆಳೆ ಹಾನಿ ಸಂಭವಿಸುತ್ತಿತ್ತು ಮತ್ತು ಅನೇಕ ಕಡೆ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದನ್ನೆಲ್ಲ ಗಮನಿಸಿ ಶಾಶ್ವತ ಪರಿಹಾರ ಎನ್ನುವಂತೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಸಿದ ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಿದೆ. ಅಲೈನ್‌ಮೆಂಟ್ ಅಪ್ರೂವಲ್ ಕಮಿಟಿ ಅನುಮತಿ ನೀಡಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ಹೆದ್ದಾರಿಯು ನವಲಗುಂದ ಪಟ್ಟಣದ ಮಧ್ಯ ಭಾಗದಿಂದ ಹಾದು ಹೋಗುವ ಕಾರಣ ಟ್ರಾಫಿಕ್ ಸಮಸ್ಯೆಗಳಿಂದಾಗಿ ಪಟ್ಟಣಿಗರು ರೋಸಿ ಹೋಗಿದ್ದರು. ಹೀಗಾಗಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಬಹು ವರ್ಷಗಳಿಂದಲೂ ಇದ್ದ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಂತೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸ್ಪಂದಿಸಿದ್ದಾರೆ. ಈ ಮೂಲಕ ಜನರ ಆಶಯ ಸಾಕಾರಗೊಂಡಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ ಆರಾಧ್ಯ ದೈವ ಸವದತ್ತಿ ಯಲ್ಲಮ್ಮ ದೇವಸ್ಥಾನ ಸೇರಿದಂತೆ ವಿವಿಧ ಐತಿಹಾಸಿಕ, ಧಾರ್ಮಿಕ ನಗರಗಳಿಗೆ ಸಂಪರ್ಕ ಜೋಡಿಸುತ್ತದೆ ನವಲಗುಂದ ಪಟ್ಟಣ. ಹೀಗಾಗಿ ಈ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಅಧಿಕವಾಗಿರುತ್ತದೆ. ಬೈಪಾಸ್ ರಸ್ತೆ ನಿರ್ಮಾಣದಿಂದ ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳಿಗೂ ಅನುಕೂಲವಾಗಲಿದೆ ಎಂದಿದ್ದಾರೆ.
ಕಳೆದ 10 ವರ್ಷಗಳ ಅವಧಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಆ ಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೆದ್ದಾರಿಗಳ ಅಭಿವೃದ್ಧಿಗೆ ಸದಾ ಅಗತ್ಯ ನೆರವು ನೀಡುತ್ತಿದ್ದಾರೆಂದು ಈರ್ವರಿಗೂ ಜೋಶಿ ಅಭಿನಂದನೆ ಸಲ್ಲಿಸಿದ್ದಾರೆ.
ಶೀಘ್ರ ಕಾಮಗಾರಿಗೆ ಒತ್ತಾಯ:
ನವಲಗುಂದ ಬೈಪಾಸ್ ನಿರ್ಮಾಣ ಸಂಬಂಧ ಈಗಾಗಲೇ ಡಿಪಿಆರ್ ಸಿದ್ಧಗೊಂಡಿದ್ದು, ರಾಜ್ಯ ಸರ್ಕಾರ ಶೀಘ್ರವೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳಿಗೆ ತ್ವರಿತ ಚಾಲನೆ ನೀಡಬೇಕೆಂದು ಜೋಶಿ ಒತ್ತಾಯಿಸಿದ್ದಾರೆ.