– 7 ಬ್ಯಾಂಕ್ ಖಾತೆಗಳ ಫ್ರೀಝ್‍ಗೆ ಸಿದ್ಧತೆ
– ಖಾತೆಗೆ ಹಣ ಹಾಕಿದವರ ಮಾಹಿತಿ ಸಂಗ್ರಹ
ಬೆಂಗಳೂರು: ಪೆನ್‍ಡ್ರೈವ್ ಪ್ರಕರಣ (Prajwal Revanna Pendrive Case) ಸದ್ದು ಮಾಡುತ್ತಿದ್ದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಆರ್ಥಿಕವಾಗಿ ಕಟ್ಟಿಹಾಕಲು ಎಸ್‍ಐಟಿ (SIT) ಮುಂದಾಗಿದೆ. ಪ್ರಜ್ವಲ್ ರೇವಣ್ಣಗೆ (Prajwal Revanna) ಸೇರಿದ ಎಲ್ಲಾ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯಲಾಗಿದ್ದು, ಅವರಿಗೆ ಸೇರಿದ ಬ್ಯಾಂಕ್ ಅಕೌಂಟ್‍ಗಳನ್ನು ಫ್ರೀಝ್ (Bank Accounts Freeze) ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.
ಈಗಾಗಲೇ ಪ್ರಜ್ವಲ್ ಖಾತೆಗೆ ಹಣ ಸಂದಾಯ ಆಗಿರುವ ಎಲ್ಲಾ ಮಾಹಿತಿಯನ್ನು ಎಸ್‍ಐಟಿ ಕಲೆಹಾಕಿದೆ. ಎಸ್‍ಐಟಿ ಮೂಲಗಳ ಮಾಹಿತಿಯ ಪ್ರಕಾರ ಪ್ರಜ್ವಲ್ 7 ಬ್ಯಾಂಕ್ ಅಕೌಂಟ್‍ಗಳನ್ನು ಹೊಂದಿದ್ದು, ಆ ಬ್ಯಾಂಕ್‍ಗಳ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಪಡೆದಿದ್ದಾರೆ. ಪ್ರಜ್ವಲ್ ತಲೆಮರೆಸಿಕೊಂಡು ತಿಂಗಳಾಗುತ್ತ ಬಂದಿದ್ದು, ಇನ್ನೂ ಪತ್ತೆಯಾಗದ ಹಿನ್ನೆಲೆ ಈ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ಅಮಿತ್ ಶಾನೇ ದೇವರಾಜೇಗೌಡರ ಬಳಿ ಹೇಳಿಸಿರಬಹುದು: ಪ್ರಿಯಾಂಕ್ ಖರ್ಗೆ ತಿರುಗೇಟು
ಏ.21ರಂದು ಸ್ಫೋಟಗೊಂಡ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋಗಳಲ್ಲಿ ಹಲವಾರು ಮಹಿಳೆಯರ ಅಶ್ಲೀಲ ವೀಡಿಯೋ ಎಲ್ಲೆಡೆ ಹರಿದಾಡುತ್ತಿವೆ. ಈಗಾಗಲೇ ಸಂತ್ರಸ್ತೆಯರು ಈ ಬಗ್ಗೆ ದೂರು ದಾಖಲಿಸಿದ್ದು, ಅವರ ಹೇಳಿಕೆಯನ್ನು ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಸಂತ್ರೆಸ್ತೆ ಹೇಳಿಕೆ ಪ್ರಕಾರ ಅವರ ನಿವಾಸದಲ್ಲೇ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣ ಸದ್ದು ಮಾಡುತ್ತಿದ್ದಂತೆ ವಿದೇಶಕ್ಕೆ ತೆರಳಿದ್ದ ಪ್ರಜ್ವಲ್‍ಗೆ ಈಗಾಗಲೇ ಅಧಿಕಾರಿಗಳು ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದಾರೆ. ಇನ್ನೂ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿ ರೆಡ್ ಕಾರ್ನರ್ ನೋಟಿಸ್ ನೀಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಪೆನ್ ಡ್ರೈವ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರಕರಣದ ಆರೋಪಿ ಪ್ರಜ್ವಲ್ ತಲೆಮರೆಸಿಕೊಂಡಿರುವುದು ತನಿಖೆ ನಡೆಸುತ್ತಿರುವ ಎಸ್‍ಐಟಿಗೆ ಈಗ ಹೊಸ ತಲೆನೋವು ತರಿಸಿದೆ. ಇದನ್ನೂ ಓದಿ: ಕಾನೂನು ಬಿಟ್ಟು ನಾನೇನು ಮಾತಾಡಲ್ಲ, ಕೈ ಮುಗಿಯುತ್ತೇನೆ ಬಿಟ್ಟುಬಿಡಿ: ಹೆಚ್.ಡಿ ರೇವಣ್ಣ