ಮುಂಬೈ: ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್ ಅವರಿಗೆ ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ಅವರು ನಾಯಕಿ ಆಗ್ತಾರಾ ಎಂಬ ಪ್ರಶ್ನೆ ಈಗ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಸದ್ಯ ಪ್ರಭಾಸ್ ಅವರು ‘ಪ್ರಭಾಸ್ 20’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಜೊತೆ ಮಹಾನಟಿ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಅವರು ನಿರ್ದೇಶನದ ಮೊತ್ತೊಂದು ಚಿತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಈ ಚಿತ್ರಕ್ಕೆ ಪ್ರಭಾಸ್ ಅವರಿಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಅವರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಈ ವಿಚಾರವಾಗಿ ಚಿತ್ರತಂಡ ದೀಪಿಕಾ ಪಡುಕೋಣೆ ಅವರನ್ನು ಸಂಪರ್ಕ ಮಾಡಿ ಮಾತುಕತೆ ನಡೆಸಿದೆ ಎನ್ನಲಾಗಿದೆ. ಆದರೆ ದೀಪಿಕಾ ಪಡುಕೋಣೆ ಅವರು ಇನ್ನೂ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಎಲ್ಲಾ ಅಂದುಕೊಂಡಂತೆ ಅದರೆ ಮೊದಲ ಬಾರಿಗೆ ಬಾಲಿವುಡ್ ಬೆಡಗಿ ದೀಪಿಕಾ ಟಾಲಿವುಡ್‍ನಲ್ಲಿ ನಟಿಸಲಿದ್ದಾರೆ. ಕನ್ನಡ, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ದೀಪಿಕಾ ತೆಲುಗು ಚಿತ್ರಗಳಲ್ಲಿ ನಟಿಸಿಲ್ಲ.
2018 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ನಾಗ್ ಅಶ್ವಿನ್ ನಿರ್ದೇಶನದ ಮಹಾನಟಿ ಚಿತ್ರಕ್ಕೆ ದೀಪಿಕಾ ಪಡುಕೋಣೆ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ಅಂದು ಅವರು ಈ ಸಿನಿಮಾದಲ್ಲಿ ನಟಿಸಿರಲಿಲ್ಲ. ಹಾಗಾಗಿ ಆ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರು ನಟಿಸಿದ್ದರು. ಆದರೆ ಈಗ ಮತ್ತೆ ನಾಗ್ ಅಶ್ವಿನ್ ಅವರು ತಮ್ಮ ಮುಂದಿನ ಚಿತ್ರಕ್ಕೆ ದೀಪಿಕಾ ಪಡುಕೋಣೆಯನ್ನು ಕರೆತರಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ದೀಪಿಕಾ ಮಿಂಚಿದ್ದು ಮಾತ್ರ ಬಾಲಿವುಡ್‍ನಲ್ಲಿ. ಓಂ ಶಾಂತಿ ಓಂ ಚಿತ್ರದ ಮೂಲಕ ಬಾಲಿವುಡ್‍ಗೆ ಹಾರಿದ ಈ ಚೆಲುವೆ ಅಲ್ಲೇ ಭಾರತದ ನಂಬರ್ ಒನ್ ನಟಿಯಾಗಿ ಬೆಳೆದರು. ಸದ್ಯ ಅವರ ನಟನೆಯ ’83’ ಚಿತ್ರದ ಬಿಡುಗಡೆ ಸಿದ್ಧವಾಗಿದೆ. ಇತ್ತೀಚೆಗೆ ತೆರೆಕಂಡ ದೀಪಿಕಾ ಅವರ ಛಾಪಕ್ ಚಿತ್ರ ಗಲ್ಲ ಪಟ್ಟಿಗೆಯಲ್ಲಿ ಅಷ್ಟೇನು ಸದ್ದು ಮಾಡಿರಲಿಲ್ಲ.
ಪ್ರಭಾಸ್ ಅವರು ರಾಜಮೌಳಿ ನಿರ್ದೇಶನದ ಬಾಹುಬಲಿಯ ಎರಡು ಸರಣಿಯ ನಂತರ ಸಹೋ ಸಿನಿಮಾ ಮಾಡಿದ್ದರು. ಆದರೆ ಈ ಸಿನಿಮಾ ಅಷ್ಟೇನು ಹಿಟ್ ಆಗಿರಲಿಲ್ಲ. ಆ್ಯಕ್ಷನ್ ಚಿತ್ರವಾದ ಸಾಹೋ ಪ್ರೇಕ್ಷಕನನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಈಗ ಒಂದು ದೊಡ್ಡ ಬ್ರೇಕ್‍ಗಾಗಿ ಕಾಯುತ್ತಿರುವ ಪ್ರಭಾಸ್‍ಗೆ ಅವರು ಮುಂದಿನ ಸಿನಿಮಾ ಕೈ ಹಿಡಿಯುತ್ತಾ ಈ ಚಿತ್ರಕ್ಕೆ ದೀಪಿಕಾ ನಾಯಕಿ ಆಗ್ತಾರಾ ಎಂದು ಕಾದು ನೋಡಬೇಕಿದೆ.