– ಸರಕು ಸಾಗಣೆ ವಾಹನಗಳ ತಪಾಸಣೆಗೆ ಹೊಸ ರೂಲ್ಸ್ – ಟ್ರಕ್ ಚಾಲಕರಿಗೆ ಬಿಗ್ ರಿಲೀಫ್
– ಪ್ರತಿ ರಾಜ್ಯದಲ್ಲೂ ವಾಹನ ತಡೆದು ತಪಾಸಣೆ ಮಾಡುವಂತಿಲ್ಲ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯಲ್ಲಿ ತೆರಿಗೆ ಜಾರಿ ಹಾಗೂ ಆಡಳಿತ ಕ್ರಮಗಳಿಗೆ ಸಂಬಂಧಿಸಿದಂತೆ ಜಿಎಸ್ಟಿ ಮಂಡಳಿ (GST Council) ಇಂದು ಹಲವು ಮಹತ್ವದ ಸುಧಾರಣೆಗಳನ್ನ ಪ್ರಸ್ತಾಪಿಸಿದೆ.
ಜಿಎಸ್ಟಿ ಅಡಿಯಲ್ಲಿ ಬಂಧಿಸುವ ಅಧಿಕಾರವನ್ನ (GST Power of Arrest) ತೆಗೆದುಹಾಕುವುದು, ವಿಚಾರಣೆಗೆ ಒಳಪಡಿಸುವ ಹಣದ ಮಿತಿಯನ್ನು 1 ಕೋಟಿಯಿಂದ 5 ಕೋಟಿ ರೂ.ಗೆ ಹೆಚ್ಚಿಸುವುದು ಹಾಗೂ ಸಾಮಾನ್ಯ ದಂಡವನ್ನು 25,000 ರಿಂದ 10,000 ರೂ.ಗೆ ಇಳಿಸುವುದು ಪ್ರಮುಖ ಪ್ರಸ್ತಾವನೆಗಳಾಗಿವೆ.

ಇಂದು ದೆಹಲಿಯಲ್ಲಿ ನಡೆದ 57ನೇ ಜಿಎಸ್ಟಿ ಮಂಡಳಿ ಸಭೆಯ ಫಲಿತಾಂಶಗಳ ಕುರಿತು ಹೊರಡಿಸಲಾದ ಟಿಪ್ಪಣಿಯಲ್ಲಿ ಹೊಸ ಸುಧಾರಣೆಗಳ ಬಗ್ಗೆ ವಿವರಿಸಲಾಗಿದೆ. ನೋಂದಣಿ, ರಿಟರ್ನ್ಸ್, ಮರುಪಾವತಿ, ಮೇಲ್ಮನವಿ ಮತ್ತು ವ್ಯಾಜ್ಯ, ಇನ್ಪುಟ್ ತೆರಿಗೆ ಕ್ರೆಡಿಟ್, ಸರಕು ಸಾಗಣೆ ಹಾಗೂ ರಫ್ತು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಕ್ರಿಯೆಗಳನ್ನ ಸರಳಗೊಳಿಸುವ ಕ್ರಮಗಳನ್ನ ಮಂಡಳಿ ಪ್ರಸ್ತಾಪಿಸಿದೆ.

ಜಿಎಸ್ಟಿ ಅಡಿಯಲ್ಲಿ ಬಂಧನದ ಅಧಿಕಾರ ರದ್ದು
ಜಿಎಸ್ಟಿ ವ್ಯವಸ್ಥೆಯಲ್ಲಿನ ಅತ್ಯಂತ ಪ್ರಮುಖ ಬದಲಾವಣೆಗಳಲ್ಲಿ ಒಂದಾಗಿ ಬಂಧನದ ಅಧಿಕಾರ ತೆಗೆದುಹಾಕಲು ಮಂಡಳಿ ಪ್ರಸ್ತಾಪಿಸಿದೆ. ಅಲ್ಲದೆ, ಪ್ರಕರಣವನ್ನು ವಿಚಾರಣೆಗೆ ಒಳಪಡಿಸುವ ತೆರಿಗೆ ಮೊತ್ತದ ಮಿತಿಯನ್ನ 1 ಕೋಟಿಯಿಂದ 5 ಕೋಟಿ ರೂ. ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಕನಿಷ್ಠ ಶಿಕ್ಷೆಯ ನಿಯಮವನ್ನೂ ತೆಗೆದುಹಾಕಲಾಗುತ್ತದೆ. ದಂಡ, ಜೈಲು ಶಿಕ್ಷೆ ಅಥವಾ ಎರಡರಲ್ಲಿ ಯಾವುದನ್ನು ವಿಧಿಸಬೇಕು ಎಂಬುದನ್ನು ಪ್ರತಿಯೊಂದು ಪ್ರಕರಣದ ಪರಿಸ್ಥಿತಿಯನ್ನ ಆಧರಿಸಿ ನ್ಯಾಯಾಲಯವೇ ನಿರ್ಧರಿಸಲಿದೆ. ಇನ್ನೂ ನಿರ್ದಿಷ್ಟ ದಂಡದ ನಿಯಮ ಇಲ್ಲದ ಸಂದರ್ಭಗಳಲ್ಲಿ ವಿಧಿಸಲಾಗುವ ಸಾಮಾನ್ಯ ದಂಡದ ಮೊತ್ತವನ್ನ 25,000 ರಿಂದ 10,000 ರೂ.ಗೆ ಇಳಿಸಲು ಪ್ರಸ್ತಾಪಿಸಲಾಗಿದೆ.
ಬಂಧನ ಅಧಿಕಾರ ಎಂದರೇನು?
ಜಿಎಸ್ಟಿ ಬಂಧನ ಅಧಿಕಾರ (GST Power of Arrest) ಎಂದರೆ ಸರಕು ಮತ್ತು ಸೇವಾ ತೆರಿಗೆ (GST) ಕಾಯಿದೆಯಡಿ ಗಂಭೀರ ತೆರಿಗೆ ವಂಚನೆ ಎಸಗುವ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಅಥವಾ ಬಂಧಿಸಲು ತೆರಿಗೆ ಅಧಿಕಾರಿಗಳಿಗೆ ಅಥವಾ ಆಯುಕ್ತರಿಗೆ ನೀಡಿರುವ ಕಾನೂನು ಶಕ್ತಿ.
ತಡವಾಗಿ ರಿಟರ್ನ್ ಸಲ್ಲಿಸುವುದು, ತಪ್ಪು ಮಾಡುವುದು ಅಥವಾ ತೆರಿಗೆ ಪಾವತಿಯಲ್ಲಿ ವಿಳಂಬವಾಗುವುದು ಸೇರಿದಂತೆ ಸಾಮಾನ್ಯ ಉಲ್ಲಂಘನೆಗಳಿಗೆ ತೆರಿಗೆ ವಸೂಲಿ, ಬಡ್ಡಿ ಮತ್ತು ಪ್ರಮಾಣಾನುಗುಣ ದಂಡ ಮಾತ್ರ ಅನ್ವಯವಾಗಲಿದೆ. ಇದಕ್ಕಿಂತ ಹೆಚ್ಚಿನ ಕ್ರಮ ಇರುವುದಿಲ್ಲ. ಮಾರಾಟಗಾರ ಮತ್ತು ಖರೀದಿದಾರರ ಇನ್ವಾಯ್ಸ್ಗಳನ್ನ ಜಿಎಸ್ಟಿ ವ್ಯವಸ್ಥೆಯೇ ಹೋಲಿಕೆ ಮಾಡಬಲ್ಲದು. ನಕಲಿ ಇನ್ಪುಟ್ ತೆರಿಗೆ ಕ್ರೆಡಿಟ್ ಸೃಷ್ಟಿಯಾದಾಗ ಅದನ್ನ ಪತ್ತೆಹಚ್ಚುವ ಸಾಮರ್ಥ್ಯವೂ ವ್ಯವಸ್ಥೆಗೆ ಬಂದಿದೆ. ಕಾನೂನು ರೂಪುಗೊಂಡ ಸಂದರ್ಭದಲ್ಲಿ ಇಂತಹ ತಂತ್ರಜ್ಞಾನ ಇರಲಿಲ್ಲ ಎಂದು ಮಂಡಳಿ ಹೇಳಿದೆ.

10 ಸಾವಿರಕ್ಕಿಂತ ಕಡಿಮೆ ಮೊತ್ತಕ್ಕೆ ನೋಟಿಸ್ ಇಲ್ಲ
ಜಿಎಸ್ಟಿ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡುವ ಮತ್ತು ಜಾರಿಗೊಳಿಸುವ ವಿಧಾನ, ಪೂರ್ವ-ನೋಟಿಸ್, ವಂಚನೆ ಆರೋಪ ಯಾವ ಸಂದರ್ಭದಲ್ಲಿ ಮಾಡಬೇಕು, ವಿಚಾರಣೆ ನಡೆಸುವ ವಿಧಾನ ಹಾಗೂ ಆದೇಶಗಳನ್ನ ಬರೆಯುವ ಕ್ರಮಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಮಾನದಂಡ ರೂಪಿಸಲು ಮಂಡಳಿ ಪ್ರಸ್ತಾಪಿಸಿದೆ. 10,000 ರೂ.ಗಿಂತ ಕಡಿಮೆ ಮೊತ್ತ ಒಳಗೊಂಡ ಪ್ರಕರಣಗಳಿಗೆ ಯಾವುದೇ ನೋಟಿಸ್ ನೀಡಲಾಗುವುದಿಲ್ಲ. ಸರಿಯಾದ ಇನ್ವಾಯ್ಸ್ ಹೊಂದಿರುವ, ಸರಕುಗಳನ್ನ ಸ್ವೀಕರಿಸಿರುವ ಮತ್ತು ಪೂರೈಕೆದಾರರಿಗೆ ಸಂಪೂರ್ಣ ಹಣ ಪಾವತಿಸಿರುವ ಪ್ರಾಮಾಣಿಕ ಖರೀದಿದಾರರಿಗೆ ರಕ್ಷಣೆ ನೀಡುವ ಬಗ್ಗೆಯೂ ಮಂಡಳಿ ಪರಿಶೀಲನೆ ನಡೆಸಿದೆ. ಈ ಕುರಿತು ಅಧಿಕಾರಿಗಳ ಸಮಿತಿಯೊಂದು 3 ತಿಂಗಳೊಳಗೆ ಅಧ್ಯಯನ ನಡೆಸಲಿದೆ. ಬಳಿಕ ಮುಂದಿನ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವನೆ ಮಂಡಿಸಲಾಗುತ್ತದೆ.
ಜಿಎಸ್ಟಿ ಮರುಪಾವತಿ ಇನ್ಮುಂದೆ ಮತ್ತಷ್ಟು ವೇಗ
ಜಿಎಸ್ಟಿ ಮರುಪಾವತಿ ಅರ್ಜಿಯ ಸ್ವೀಕೃತಿಯನ್ನ ದೃಢೀಕರಿಸುವ ಗಡುವನ್ನ 15 ದಿನಗಳಿಂದ 10 ದಿನಗಳಿಗೆ ಇಳಿಸಲು ಪ್ರಸ್ತಾಪಿಸಲಾಗಿದೆ. 10 ದಿನಗಳೊಳಗೆ ಸ್ವೀಕೃತಿ ದೃಢೀಕರಣ ಅಥವಾ ಕೊರತೆ ಸೂಚಿಸುವ ಮೆಮೊ ನೀಡದಿದ್ದರೆ, ಅರ್ಜಿಯನ್ನ ಸ್ವಯಂಚಾಲಿತವಾಗಿ ಸ್ವೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.
ಅಪಾಯದ ಮೌಲ್ಯಮಾಪನದ ಆಧಾರದ ಮೇಲೆ ಮರುಪಾವತಿ ಮೊತ್ತದ 90 ಪ್ರತಿಶತವನ್ನು ಅಧಿಕಾರಿಯ ಬದಲಾಗಿ ವ್ಯವಸ್ಥೆಯೇ ಮಂಜೂರು ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಅರ್ಜಿಯ ಸ್ವೀಕೃತಿಯ 3 ಕೆಲಸದ ದಿನಗಳೊಳಗೆ ಆದೇಶ ಹೊರಡಿಸಲಾಗುತ್ತದೆ. ಪ್ರಸ್ತುತ ಈ ಪ್ರಕ್ರಿಯೆಗೆ 7 ದಿನಗಳವರೆಗೆ ಸಮಯ ಬೇಕಾಗುತ್ತದೆ. ಅಷ್ಟೇ ಅಲ್ಲದೇ, ಹೆಚ್ಚುವರಿಯಾಗಿ ಉಳಿದಿರುವ ನಗದು ಮರುಪಾವತಿಯೂ ಇನ್ಮುಂದೆ ಅಧಿಕಾರಿಯ ಹಸ್ತಕ್ಷೇಪವಿಲ್ಲದೇ ಸಂಪೂರ್ಣ ಸ್ವಯಂಚಾಲಿತವಾಗಿ ನಡೆಯಲಿದೆ.
ಸರಕು ಸಾಗಣೆ ವಾಹನಗಳ ತಪಾಸಣೆಗೆ ಹೊಸ ನಿಯಮ
ರಾಜ್ಯಗಳ ನಡುವೆ ಸಾಗುವ ಸರಕುಗಳ ತಪಾಸಣಾ ಕ್ರಮದಲ್ಲೂ ಮಹತ್ವದ ಬದಲಾವಣೆ ತರಲು ಮಂಡಳಿ ಪ್ರಸ್ತಾಪಿಸಿದೆ. ನಿರ್ದಿಷ್ಟ ಗುಪ್ತಚರ ಮಾಹಿತಿ ಅಥವಾ ಅನುಮಾನಾಸ್ಪದ ಮಾಹಿತಿಯ ಆಧಾರದ ಮೇಲೆ ಮಾತ್ರ ವಾಹನವನ್ನು ತಡೆದು ಪರಿಶೀಲಿಸಬಹುದು. ಅದಕ್ಕೂ ಮುನ್ನ ಜಂಟಿ ಆಯುಕ್ತರ ಹುದ್ದೆಗಿಂತ ಕಡಿಮೆಯಲ್ಲದ ಅಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಸರಕು ಯಾವ ರಾಜ್ಯದಿಂದ ಹೊರಟಿದೆಯೋ ಆ ರಾಜ್ಯ ಮತ್ತು ಸರಕು ತಲುಪಬೇಕಿರುವ ನಿರ್ದಿಷ್ಟ ಸ್ಥಾನ ರಾಜ್ಯ ಮಾತ್ರ ಸರಕು ಸಾಗಣೆಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಮಾರ್ಗಮಧ್ಯೆ ಬರುವ ಇತರ ರಾಜ್ಯಗಳು ವಾಹನವನ್ನ ತಡೆದು ಪರಿಶೀಲಿಸುವಂತಿಲ್ಲ. ಉದಾಹರಣೆಗೆ, ಐದು ರಾಜ್ಯಗಳ ಮೂಲಕ ಸಾಗುವ ಸರಕು ಸಾಗಣೆ ವಾಹನವನ್ನ ಈ ಹಿಂದೆ ಮಾರ್ಗದಲ್ಲಿನ ಪ್ರತಿಯೊಂದು ರಾಜ್ಯದಲ್ಲೂ ಪರಿಶೀಲಿಸಬಹುದಾಗಿತ್ತು. ಹೊಸ ವ್ಯವಸ್ಥೆಯಲ್ಲಿ ಸರಕು ಹೊರಟ ರಾಜ್ಯ ಮತ್ತು ತಲುಪಬೇಕಾದ ರಾಜ್ಯದಲ್ಲಿ ಮಾತ್ರ ಪರಿಶೀಲನೆ ನಡೆಯಲಿದೆ. ಅಗತ್ಯ ದಾಖಲೆಗಳನ್ನ ವ್ಯವಸ್ಥೆಯಲ್ಲಿ ಮುಂದುವರಿದಂತೆ ಪರಿಶೀಲಿಸಲಾಗುತ್ತದೆ. ಅಂದ್ರೆ, ಭೌತಿಕ ತಪಾಸಣೆ ಮೊದಲು ನಡೆಯುವ ಬದಲು, ಮಾಹಿತಿ ಆಧಾರಿತ ಪರಿಶೀಲನೆಯ ನಂತರ ಮಾತ್ರ ನಡೆಯಲಿದೆ ಎಂದು ಮಂಡಳಿ ಹೇಳಿದೆ.
ಜಿಎಸ್ಟಿ ನೋಂದಣಿ ಮತ್ತು ರಿಟರ್ನ್ಸ್ ಸ್ವಯಂಚಾಲಿತ
ಕಡಿಮೆ ಅಪಾಯದ ಅರ್ಜಿದಾರರಿಗೆ ಹಾಗೂ ನೋಂದಾಯಿತ ವ್ಯಕ್ತಿಗಳಿಗೆ ನೀಡುವ ಸರಬರಾಜಿನ ಮೇಲಿನ ಮಾಸಿಕ ತೆರಿಗೆ 2.5 ಲಕ್ಷ ರೂ.ಗಳನ್ನು ಮೀರದವರಿಗೆ ಈಗಾಗಲೇ ಮೂರು ಕೆಲಸದ ದಿನಗಳೊಳಗೆ ಅಧಿಕಾರಿಯ ಹಸ್ತಕ್ಷೇಪವಿಲ್ಲದೆ ಜಿಎಸ್ಟಿ ನೋಂದಣಿ ನೀಡಲಾಗುತ್ತಿದೆ. ಪ್ರಸ್ತುತ ಒಟ್ಟು ನೋಂದಣಿಗಳಲ್ಲಿ ಶೇ.61ರಷ್ಟು ನೋಂದಣಿಗಳು ಈ ಸ್ವಯಂಚಾಲಿತ ಮಾರ್ಗದ ಮೂಲಕವೇ ನಡೆಯುತ್ತಿವೆ. ಉಳಿದ ಶೇ.39ರಷ್ಟು ಅರ್ಜಿಗಳು ಅಧಿಕಾರಿಗಳ ಪರಿಶೀಲನೆಗೆ ಹೋಗುತ್ತವೆ ಎಂದು ಮಂಡಳಿ ತಿಳಿಸಿದೆ.
ಇದರೊಂದಿಗೆ ರಿಟರ್ನ್ಸ್ಗಳಲ್ಲಿ ಕಂಡುಬರುವ ವ್ಯತ್ಯಾಸಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಸುಮಾರು 95,000 ವ್ಯವಸ್ಥೆ-ಸೃಷ್ಟಿತ ನೋಟಿಸ್ಗಳು ನೀಡಲಾಗುತ್ತಿವೆ ಎಂದು ಮಂಡಳಿ ತಿಳಿಸಿದೆ.

