ರಾಯಚೂರು: ರಾಜ್ಯದ ಪ್ರಥಮ ಶಾಖೋತ್ಪನ್ನ ವಿದ್ಯುತ್ ಕೇಂದ್ರ (RTPS) ಈಗ ಹಂತ ಹಂತವಾಗಿ ಮುಚ್ಚುವ ಸಿದ್ಧತೆಯಲ್ಲಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕೇಂದ್ರದ ಎರಡು ಘಟಕಗಳು ತಿಂಗಳಾನುಗಟ್ಟಲೇ ಕಾರ್ಯಸ್ಥಗಿತಗೊಂಡಿದ್ದು, ಒಂದೇ ಒಂದು ವ್ಯಾಟ್ ವಿದ್ಯುತ್ (Electricity) ಉತ್ಪಾದಿಸಿಲ್ಲ. ಪದೇ, ಪದೇ ಅವಘಡಗಳು ಸಂಭವಿಸುತ್ತಿರುವುದು, ಹಳೆಯದಾದ ಘಟಕಗಳ ನವೀಕರಣ ನಡೆಯದಿರುವುದು ಅನುಮಾನ ಮೂಡಿಸಿದೆ.
ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇಕಡಾ 70 ರಷ್ಟು ಪಾಲನ್ನು ಹೊಂದಿದ್ದ ರಾಯಚೂರಿನ (Raichur) ಶಕ್ತಿನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‌ಟಿಪಿಎಸ್‌ನ ಸಾಮರ್ಥ್ಯ ಈಗ ಕಡಿಮೆಯಾಗಿದೆ. ಒಟ್ಟು 1,720 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೇಂದ್ರ ಈಗ ಕೇವಲ 666 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಒಟ್ಟು ಎಂಟು ಘಟಕಗಳಲ್ಲಿ 5 ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 35 ವರ್ಷಕ್ಕೂ ಹಳೆಯದಾದ ಒಂದು ಮತ್ತು ಎರಡನೇ ಘಟಕ ಕಳೆದ ಮೂರು ತಿಂಗಳಿನಿಂದ ಕಾರ್ಯಸ್ಥಗಿತಗೊಳಿಸಿವೆ. ಇದನ್ನೂ ಓದಿ: RTPSನಲ್ಲಿ ಅಗ್ನಿ ಅವಘಡ – 25ಕ್ಕೂ ಹೆಚ್ಚು ಕ್ಯಾರಿಂಗ್ ರೋಲರ್‌ಗಳು ಬೆಂಕಿಗಾಹುತಿ
ವಿದ್ಯುತ್ ಉತ್ಪಾದನೆ ಕುಂಠಿತಕ್ಕೆ ಅಧಿಕಾರಿಗಳು ವಿದ್ಯುತ್ ಬೇಡಿಕೆ ಕುಸಿತ ಹಾಗೂ ತಾಂತ್ರಿಕ ಸಮಸ್ಯೆಗಳ ಕಾರಣ ಹೇಳುತ್ತಿದ್ದಾರೆ. ಆದ್ರೆ ಸದ್ಯ ರಾಜ್ಯದ ವಿದ್ಯುತ್ ಬೇಡಿಕೆ 6,555 ಮೆಗಾ ವ್ಯಾಟ್ ಇದ್ದು ರಾಜ್ಯದ ವಿದ್ಯುತ್ ಉತ್ಪಾದನೆ 2,342 ಮೆಗಾ ವ್ಯಾಟ್ ಇದೆ. ರಾಜ್ಯ ಸರ್ಕಾರ ಹೊಸ ಶಾಖೋತ್ಪನ್ನ ವಿದ್ಯುತ್ ಕೇಂದ್ರ ತೆರೆಯುವ ಆಸಕ್ತಿ ಹೊಂದಿಲ್ಲ ನಿಜ ಆದ್ರೆ ಇರುವ ವಿದ್ಯುತ್ ಕೇಂದ್ರವನ್ನು ಸರಿಯಾಗಿ ನಿರ್ವಹಣೆ ಮಾಡದೇ ಹಳೆಯ ಘಟಕಗಳನ್ನು ಒಂದೊಂದಾಗೇ ಮುಚ್ಚಲು ಮುಂದಾಗಿದೆ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ.
ಕೆಪಿಸಿಎಲ್ ಖಾಸಗಿ ಸಂಸ್ಥೆ ಕೈಯಲ್ಲಿ ನಿರ್ವಹಣೆ ಜವಾಬ್ದಾರಿ ಕೊಟ್ಟಿದ್ದು ಆರ್‌ಟಿಪಿಎಸ್‌ನಲ್ಲಿ ಅವಘಡಗಳ ಮೇಲೆ ಅವಘಡಗಳು ಸಂಭವಿಸುತ್ತಲೇ ಇವೆ. ಆಗಸ್ಟ್ ತಿಂಗಳಲ್ಲಿ ಹಾರೋ ಬೂದಿ ಸಾಗಿಸುವ ಬಂಕರ್‌ಗಳು ಕಳಚಿ ಬಿದ್ದಿದ್ದವು. ಘಟನೆಯಿಂದ ಮೂರು ತಿಂಗಳಾದರೂ ಒಂದನೇ ಘಟಕ ಇನ್ನೂ ಕಾರ್ಯಾರಂಭ ಮಾಡಿಲ್ಲ. ಇತ್ತೀಚೆಗೆ ಕಲ್ಲಿದ್ದಲು ಸರಬರಾಜು ಮಾಡುವ ಕನ್ವೇಯರ್ ಬೆಲ್ಟ್‌ಗೆ ಬೆಂಕಿ ಹೊತ್ತಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. 85ಕ್ಕೂ ಹೆಚ್ಚು ಕ್ಯಾರಿಂಗ್ ರೋಲರ್‌ಗಳು ಬೆಂಕಿಗಾಹುತಿಯಾಗಿವೆ. ಇಂತಹ ಘಟನೆಗಳು ಮರುಕಳಿಸುತ್ತಲೇ ಒಂದೊಂದೇ ಘಟಕ ವಿದ್ಯುತ್ ಉತ್ಪಾದನೆ ನಿಲ್ಲಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಎಲ್ಲಿ ಆತಂಕಗಳು ಹೆಚ್ಚಾಗುತ್ತೋ ಆಗ ಕ್ಷೇತ್ರ ಪರ್ಯಟನೆ ನಡೆಯುತ್ತೆ: ಸಿದ್ದು ಬಗ್ಗೆ ಬಿ.ವೈ.ರಾಘವೇಂದ್ರ ವ್ಯಂಗ್ಯ
ಅಗತ್ಯ ಪ್ರಮಾಣದ ಕಲ್ಲಿದ್ದಲು ಕೊರತೆ ಜೊತೆಗೆ ನಿರಂತರ ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಆರ್‌ಟಿಪಿಎಸ್ ನಿರ್ವಹಣೆ ಕೊರತೆಯನ್ನೂ ಎದುರಿಸುತ್ತಿದೆ. ಇಡೀ ರಾಜ್ಯಕ್ಕೆ ಬೆಳಕು ನೀಡುವ ವಿದ್ಯುತ್ ಕೇಂದ್ರ ಕತ್ತಲೆಡೆಗೆ ಜಾರುತ್ತಿದೆಯಾ ಅನ್ನೋ ಆತಂಕ ಇಲ್ಲಿನ ನೌಕರರನ್ನು ಕಾಡುತ್ತಿದೆ.