ಕಾರವಾರ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಜನರಿಗೆ ಉಚಿತ ಸವಲತ್ತು ನೀಡುತ್ತಿದೆ. ಆದರೆ, ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್ ಸಹ ಪಾವತಿ ಮಾಡಲಾಗದೇ ಕತ್ತಲಲ್ಲಿ ಮುಳುಗುವಂತಾಗಿದೆ. ಹೆಸ್ಕಾಂ ವಿಭಾಗದ ಏಳು ಜಿಲ್ಲೆಗಳಲ್ಲಿ 13.15 ಕೋಟಿ ಸರ್ಕಾರಿ ಕಚೇರಿಗಳ ಬಿಲ್ ಬಾಕಿ ಉಳಿಸಿಕೊಂಡಿದೆ. ಇದೀಗ ಹೆಸ್ಕಾಂ ಇಲಾಖೆ ಹಣ ತುಂಬದ ಸರ್ಕಾರಿ ಕಚೇರಿಗಳ ವಿದ್ಯುತ್ ಕಡಿತದ ಶಾಕ್ ನೀಡಿದೆ.
ಹೌದು, ಗುರುವಾರ ಕಾರವಾರದಲ್ಲಿ ಹಲವು ಸರ್ಕಾರಿ ಕಚೇರಿಗೆ ಕತ್ತಲ ದಿನವಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಧಿಕಾರಿ ಕಟ್ಟಡದಲ್ಲಿ ಇರುವ ಎಸಿ ಕಚೇರಿ ಹಾಗೂ ತಹಶಿಲ್ದಾರ್, ನೋಂದಣಾಧಿಕಾರಿ ಕಚೇರಿ ಹೀಗೆ ಕಾರವಾರದಲ್ಲಿ ಇದ್ದ 15 ಕ್ಕೂ ಹೆಚ್ಚು ಕಚೇರಿಯ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿತ್ತು.
ಹೆಸ್ಕಾಂಗೆ ಪಾವತಿಸಬೇಕಾದ ವಿದ್ಯುತ್ ಬಿಲ್ ಪಾವತಿಸದೇ ಕಳೆದ ಒಂದು ವರ್ಷದಿಂದ ಹೆಸ್ಕಾಂ ನೀಡಿದ ನೋಟಿಸ್‌ಗೂ ಉತ್ತರ ನೀಡದ ಅಧಿಕಾರಿಗಳ ವರ್ತನೆಯಿಂದಾಗಿ ಜನರಿಗೆ 200 ಯುನಿಟ್ ಫ್ರೀಯಾಗಿ ನೀಡಿ ಆರ್ಥಿಕ ಕೊರತೆ ಅನುಭವಿಸುತ್ತಿರುವ ಹೆಸ್ಕಾಂ ಇಲಾಖೆ ಹಣ ವಸೂಲಿಗಾಗಿ ಇದೀಗ ಸರ್ಕಾರಿ ಕಚೇರಿಯ ವಿದ್ಯುತ್ ಕಡಿತ ಮಾಡಿದೆ.
ಕಾರವಾರ ಭಾಗದ 15 ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು, ಇದರಿಂದಾಗಿ ದಿನ ನಿತ್ಯ ನಡೆಯಬೇಕಾದ ಕಾರ್ಯಗಳು ಅಡ್ಡಿಯಾಗುವಂತೆ ಆಗಿದೆ. ಸಾರ್ವಜನಿಕರಿಗೆ ಆಗಬೇಕಾದ ಕಾರ್ಯಗಳು ಆಗದೇ ಶಾಪ ಹಾಕುವಂತಾಯಿತು.
ಹೆಸ್ಕಾಂ ವ್ಯಾಪ್ತಿಗೆ ರಾಜ್ಯದ ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ಗದಗ, ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳು ಸೇರುತ್ತವೆ. ಕಳೆದ ಎಂಟು ತಿಂಗಳಿಂದಲೂ ರಾಜ್ಯ ಸರ್ಕಾರ ಸ್ವಾಮ್ಯದ ಜಿಲ್ಲಾ, ತಾಲೂಕು ಕಚೇರಿಗಳು ಒಟ್ಟು 13.15 ಕೋಟಿ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನೊಂದರಲ್ಲೇ 2,18,25,000 ರೂ. ಬಾಕಿ ಇವೆ.
ಇವುಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 60,37,980 ರೂ., ಗ್ರಾಮೀಣಾಭಿವೃದ್ಧಿ ಇಲಾಖೆ (ಬೀದಿ ದೀಪ, ಕುಡಿಯುವ ನೀರು, ಕಚೇರಿ ಸೇರಿ) 4.89 ಕೋಟಿ ರೂ., ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಇಲಾಖೆಗೆ 1.57 ಕೋಟಿ ರೂ., ನಗರಾಭಿವೃದ್ಧಿ ಇಲಾಖೆ (ಬೀದಿ ದೀಪ, ಕುಡಿಯುವ ನೀರು, ಕಚೇರಿ ಸೇರಿ) 1.29 ಕೋಟಿ ರೂ., ಶಿಕ್ಷಣ ಇಲಾಖೆ (ಶಾಲೆಗಳು ಸೇರಿ) 67.78 ಲಕ್ಷ ರೂ., ಕರ್ನಾಟಕ ನೀರಾವರಿ ನಿಗಮ 60.93 ಲಕ್ಷ ರೂ., ಆರೋಗ್ಯ ಇಲಾಖೆ (ಆಸ್ಪತ್ರೆಗಳು ಸೇರಿ) 48.87 ಲಕ್ಷ ರೂ., ಅರಣ್ಯ ಇಲಾಖೆ 31.47 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ಅಂಗನವಾಡಿಗಳು ಸೇರಿ) 16.85 ಲಕ್ಷ ರೂ., ಕಂದಾಯ ಇಲಾಖೆ (ಮುಜರಾಯಿ ಸೇರಿ) 15.05 ಲಕ್ಷ ರೂ., ಗೃಹ ಇಲಾಖೆ 13.21 ಲಕ್ಷ ಬಾಕಿ ಉಳಿಸಿಕೊಂಡಿವೆ. ಹೆಸ್ಕಾಂ ನಷ್ಟವಾಗುವ ಸಂಬಂಧ ಇದೀಗ ಹಣ ವಸೂಲಿಗಾಗಿ ಈ ಕಚೇರಿಗಳ ವಿದ್ಯುತ್ ನಿಲುಗಡೆ ಮಾಡಿದೆ.
ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್‌ಗಳನ್ನು ಹಲವು ಇಲಾಖೆಗಳು ಕಳೆದ ಒಂದು ವರ್ಷದಿಂದ ಪಾವತಿಸಿಲ್ಲ. ನೋಟಿಸ್ ನೀಡಿದರೂ ಉತ್ತರ ನೀಡಿಲ್ಲ. ವಿದ್ಯುತ್ ಕೊರತೆ ಇದ್ದು, ಜನರಿಗೆ ವಿದ್ಯುತ್ ನೀಡಲು ವಿದ್ಯುತ್ ಖರೀದಿ ಮಾಡಬೇಕು. ಇದಕ್ಕೆ ಹಣದ ಅವಶ್ಯಕತೆ ಇದೆ. ಹೀಗಾಗಿ, ಈ ಅಭಿಯಾನ ಪ್ರಾರಂಭ ಮಾಡಿದ್ದೇವೆ ಎಂದು ಕಾರವಾರ-ಅಂಕೋಲ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪೆಡ್ನೇಕರ್ ಮಾಹಿತಿ ನೀಡಿದ್ದಾರೆ.

