– 150 ಮಕ್ಕಳು ಎರಡೇ ಎರಡು ಶೌಚಾಲಯ
– ಹಾದಿ ಬೀದಿಯಲ್ಲಿ ಮಕ್ಕಳು ಸ್ನಾನ
ಬಳ್ಳಾರಿ: ಸರ್ಕಾರಿ ಶಾಲೆ ಶಿಕ್ಷಣಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಇಲ್ಲೊಂದು ಶಾಲೆ ಇದೆ. ಆ ಶಾಲೆಯ ಸ್ಥಿತಿಯನ್ನು ನೋಡಿದರೆ ಎಂಥವರಿಗೂ ಅಚ್ಚರಿ ಆಗದೇ ಇರದು. ಈ ಶಾಲೆಯಲ್ಲಿ ಕಲಿಯುವ ಮಕ್ಕಳ ಸ್ಥಿತಿಯನ್ನು ನೀವೂ ನೋಡಿದ್ರೆ ಈ ರೀತಿಯ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಬೇಕಾ ಅನ್ನೋ ಪ್ರಶ್ನೆ ಮೂಡದೇ ಇರದು.
Advertisement
ಹೌದು. ಕಳೆದ ನಾಲ್ಕೈದು ತಿಂಗಳ ಹಿಂದೆ ಇದು ಒಂದು ಕೋಳಿ ಫಾರ್ಮ್ ಆಗಿತ್ತು. ಈ ಕೋಳಿ ಫಾರ್ಮ್ ನಲ್ಲಿ ಸುಮಾರು 5 ಸಾವಿರ ಕೋಳಿಗಳನ್ನು ಸಾಕಲಾಗುತಿತ್ತು. ಆದರೆ ಈಗ ಅದೇ ಕೋಳಿ ಫಾರ್ಮ್ ಇಂದು ಮಕ್ಕಳ ವಸತಿ ಶಾಲೆಯಾಗಿ ಮಾರ್ಪಟ್ಟಿದೆ. ಕೋಳಿ ಫಾರ್ಮ್ ಈಗ ವಸತಿ ಶಾಲೆಯಾಗಿ ಬದಲಾಗಿದ್ದು, ಹಿಂದುಳಿದ ಮಕ್ಕಳಿಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಇರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ದಯನೀಯ ಸ್ಥಿತಿಯಾಗಿದೆ.
Advertisement
Advertisement
ಈ ಮಕ್ಕಳ ಸ್ಥಿತಿಯನ್ನು ಒಂದು ಸಾರಿ ನೀವು ನೋಡಿದರೆ ಗೊತ್ತಾಗುತ್ತೆ. ಇಲ್ಲಿ ಸುಮಾರು 150 ಮಕ್ಕಳು ಕಲಿಯುತ್ತಿದ್ದು, ಈ ಎಲ್ಲಾ ಮಕ್ಕಳಿಗೆ ಕೇವಲ ಎರಡೇ ಎರಡು ಶೌಚಾಲಯ ನಿರ್ಮಿಸಿದ್ದಾರೆ. ಹೀಗಾಗಿ ಇಲ್ಲಿನ ಹೆಣ್ಣು ಮಕ್ಕಳು ಸ್ನಾನದ ಗೃಹದಲ್ಲಿ ಸ್ನಾನ ಮಾಡಿದ್ರೆ, ಗಂಡು ಮಕ್ಕಳು ಹಾದಿ ಬೀದಿಯಲ್ಲಿ ಸ್ನಾನ ಮಾಡುತ್ತಾರೆ. ಇಲ್ಲಿ ಕಲಿಯುವ ಮಕ್ಕಳು ಬಹುತೇಕರು ಗ್ರಾಮೀಣ ಪ್ರದೇಶದವರು. ತಮ್ಮ ತಂದೆ-ತಾಯಿಗಳು ಉದ್ಯೋಗ ಅರಸಿ ಬೇರೆ ಕಡೆಗೆ ದುಡಿಯಲು ಹೋಗುತ್ತಾರೆ. ಹೀಗಾಗಿ ಈ ಮಕ್ಕಳಿಗೆ ಇದೇ ಶಾಲೆ ಇದೇ ಮನೆ. ಇಲ್ಲಿ ಶಾಲೆಯೂ ಅದೇ ವಸತಿ ನಿಲಯವೂ ಇದೆ. ಇದೇ ಕೋಳಿ ಫಾರ್ಮ್ ನಲ್ಲಿ ಶಿಕ್ಷಣ ಇದೇ ಕೋಳಿ ಫಾರ್ಮ್ ವಸತಿ ಮಾಡಬೇಕಾದ ದಯನೀಯ ಸ್ಥಿತಿ ಈ ಮಕ್ಕಳದ್ದಾಗಿದೆ.
Advertisement
ಶಾಲೆಯಲ್ಲಿ 6 ರಿಂದ 8 ನೇ ತರಗತಿಯವರೆಗೂ ಇದೆ. ಇಲ್ಲಿ ಕಲಿಯುವ ಮಕ್ಕಳಿಗೆ ಸೂಕ್ತ ಭದ್ರತೆಯೂ ಕೂಡ ಇಲ್ಲ. ಊರ ಹೊರಗಿನ ಶಾಲೆ ಇದಾಗಿದ್ದರಿಂದ ಮಕ್ಕಳು ಭಯದಲ್ಲಿ ಬದುಕುತ್ತಿದ್ದಾರೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಕೂಡ ಇಲ್ಲಿ ಕಲಿಯುತ್ತಿದ್ದು, ಒಂದೇ ಕೋಳಿ ಫಾರ್ಮ್ ನಲ್ಲಿ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಕಲಿಯುತ್ತಿದ್ದಾರೆ.
ಈ ವಸತಿ ಶಾಲೆ ಮೊದಲು ಕೂಡ್ಲಿಗಿ ತಾಲೂಕಿನ ಖಾನಾಹೊಸಳ್ಳಿ ಇತ್ತು. ಅಲ್ಲಿ ಸರಿಯಾದ ಸ್ಥಳ ಸಿಗದ ಹಿನ್ನೆಲೆಯಲ್ಲಿ ಮತ್ತೆ ಈ ಶಾಲೆಯನ್ನು ಕೂಡ್ಲಿಗಿ ಪಟ್ಟಣದ ಬೇರೆ ವಸತಿ ಶಾಲೆಗೆ ಸ್ಥಳಾಂತರ ಮಾಡಲಾಯಿತು. ಆದರೆ ಅಲ್ಲಿಯೂ ಮಕ್ಕಳಿಗೆ ತೊಂದರೆ ಆದ ಹಿನ್ನೆಲೆಯಲ್ಲಿ ಈ ಶಾಲೆಯನ್ನು ಈ ಪಾಳು ಬಿದ್ದ ಕೋಳಿ ಫಾರ್ಮ್ ನಲ್ಲಿ ಸ್ಥಳಾಂತರ ಮಾಡಲಾಯಿತು. ಶಾಲೆಗೆ ಬಾಡಿಗೆ ಕೊಟ್ಟ ಕೋಳಿ ಫಾರ್ಮ್ ಮಾಲೀಕರು ಶೌಚಾಲಯ ಕಟ್ಟಿಸಿ ಕೊಡುವುದಾಗಿ ಹೇಳಿದ್ದಾರೆ. ಆದರೆ ಈಗ ಮಕ್ಕಳಿಗೆ ಕನಿಷ್ಠ ಸೌಲಭ್ಯಗಳು ಇಲ್ಲದೆ ಪ್ರತಿದಿನ ನರಕ ಯಾತನೆ ಅನುಭವಿಸುತ್ತಿರುವುದಾಗಿ ವಿದ್ಯಾರ್ಥಿನಿ ಶಕುಂತಲಾ ತನ್ನ ಅಳಲು ತೋಡಿಕೊಂಡಿದ್ದಾಳೆ.
ಒಟ್ಟಿನಲ್ಲಿ ಸರ್ಕಾರ ಶಿಕ್ಷಣಕ್ಕೆ ಕೋಟಿ ಕೋಟಿ ಹಣ ನೀಡುತ್ತದೆ. ಆದರೆ ಇಲ್ಲಿನ ಸ್ಥಳೀಯ ನಾಯಕರು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಕ್ಕಳು ಈ ರೀತಿಯ ನರಕದಲ್ಲಿ ಶಿಕ್ಷಣ ಕಲಿಯಬೇಕಾದ ಸ್ಥಿತಿ ನಿರ್ಮಾಣ ಆಗಿದ್ದು ಮಾತ್ರ ವಿಪರ್ಯಾಸವಾಗಿದೆ.