ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಯೋಧ್ಯ ಗ್ರಾಮದ ಪೋಸ್ಟ್ ಮ್ಯಾನ್ ಓರ್ವ ವಿವಿಧ ಮಾಸಾಶನ ಮತ್ತು ಉಳಿತಾಯ ಖಾತೆಯ ಲಕ್ಷಾಂತರ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದಾನೆ.
ರಮೇಶ್ ಎಂಬಾತನೇ ಹಣದೊಂದಿಗೆ ಪರಾರಿಯಾದ ಪೋಸ್ಟ್ ಮ್ಯಾನ್. ಮೂಲತಃ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಉಪ್ಪಳ ಗ್ರಾಮದ ರಮೇಶ ಕಳೆದ 12 ವರ್ಷದಿಂದ ಗಂಗಾವತಿ ತಾಲೂಕಿನಲ್ಲಿ ಗುತ್ತಿಗೆ ಆಧಾರದ ಮೇಲೆ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದನು.
ಏನಿದು ಪ್ರಕರಣ?: ಸುಮಾರು 30 ರಿಂದ 40 ಲಕ್ಷ ರೂ. ಹಣದೊಂದಿಗೆ ರಮೇಶ್ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ರಮೇಶ್ ಹೊಸ ಅಯೋಧ್ಯ, ಹಳೇ ಅಯೋಧ್ಯ ಮತ್ತು ಶ್ರೀಕೃಷ್ಣ ದೇವರಾಯ ನಗರ ಎಂಬ ಮೂರು ಗ್ರಾಮದ ನೂರಾರು ಮಾಸಾಶನ ಫಲಾನುಭವಿಗಳಿಗೆ ಸರ್ಕಾರ ನೀಡಿರುವ ಹಣ ಮತ್ತು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯ ಹಣವನ್ನು ಗ್ರಾಮಸ್ಥರಿಗೆ ವಿತರಿಸುತ್ತಿದ್ದನು. ಆದ್ರೆ ಇದೀಗ ಜೂನ್ 20ರಿಂದ ರಮೇಶ್ ನಾಪತ್ತೆಯಾಗಿದ್ದು, ಇದರಿಂದ ಮಾಸಾಶನ ಪಡೆಯುವ ಫಲಾನುಭವಿಗಳು ಮತ್ತು ಉಳಿತಾಯ ಖಾತೆಯ ಗ್ರಾಹಕರು ಪರದಾಡುವಂತಾಗಿದೆ.
ಆದರೆ ಇದೂವರೆಗೂ ಅಂಚೆ ಇಲಾಖೆ ಅಧಿಕಾರಿಗಳು ಮಾತ್ರ ಪೊಲೀಸರಿಗೆ ದೂರು ನೀಡಲು ಮುಂದಾಗ್ತಿಲ್ಲ. ಗ್ರಾಮಸ್ಥರು ದೂರು ನೀಡಲು ಹೋದಾಗ ಪೊಲೀಸರು ದೂರನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪ ವ್ಯಕ್ತವಾಗುತ್ತಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.