– ಆರೋಪ ಸುಳ್ಳೆಂದು ಆಣೆ ಮಾಡಿದ ಸಿಸಿ ಪಾಟೀಲ್
ಗದಗ: ಭೀಕರ ಪ್ರವಾಹ ತಂದಿಟ್ಟ ಸಂಕಷ್ಟದಿಂದ ಸಂತ್ರಸ್ತರು ಇನ್ನೂ ಚೇತರಿಸಿಕೊಂಡಿಲ್ಲ. ಈ ನಡುವೆ ಗದಗ ಜಿಲ್ಲೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ನೆರೆ ಪರಿಹಾರದ ಪಾಲಿಟಿಕ್ಸ್ ಫೈಟ್ ಶುರುವಾಗಿದೆ.
ಸರ್ಕಾರ ನೂರಾರು ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ನೀಡುತ್ತಿಲ್ಲ. ಈ ಬಗ್ಗೆ ಗಟ್ಟಿ ಧ್ವನಿಯಲ್ಲಿ ಪರಿಹಾರ ಕೇಳೋಕೆ ಹೋದರೆ ಸಂತ್ರಸ್ತರಿಗೆ ಸಚಿವರು ಹಾಗೂ ಹಿಂಬಾಲಕರು ಧಮ್ಕಿ, ಬೆದರಿಕೆ ಹಾಕುತ್ತಿದ್ದಾರೆಂಬುದು ವಿರೋಧ ಪಕ್ಷದವರ ಆರೋಪವಾಗಿದೆ. ಇತ್ತ ಸಂತ್ರಸ್ತರ ಪರಿಹಾರದಲ್ಲಿ ತಾರತಮ್ಯ, ಧಮ್ಕಿ ಹಾಕಿಲ್ಲ ಎಂದು ಸಚಿವರು ದೇವರ ಮೇಲೆ ಆಣೆ ಮಾಡಿ, ಆರೋಪವನ್ನು ತಳ್ಳಿಹಾಕಿದ್ದಾರೆ.
Advertisement
Advertisement
ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಅನೇಕ ಹಳ್ಳಿಗಳು ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳ ಪ್ರವಾಹಕ್ಕೆ ತುತ್ತಾಗಿವೆ. 3 ತಿಂಗಳಲ್ಲಿ 3 ಬಾರಿ ಪ್ರವಾಹ ಬಂದು ಸಂತ್ರಸ್ತರ ಬದುಕೇ ಕಿತ್ತುಕೊಂಡಿದೆ. ಈ ಸಂಕಷ್ಟದಿಂದ ಜನ ಇನ್ನೂ ಚೇತರಿಸಿಕೊಂಡಿಲ್ಲ. ಆಗಲೇ ಪರಿಹಾರ ವಿಷಯದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಬಿದ್ದ ಮನೆಗಳಿಗೆ ಪರಿಹಾರ ಅಥವಾ ಮನೆ ಬಾಡಿಗೆನಾದರೂ ಕೊಡಿ ಎಂದು ನರಗುಂದದಲ್ಲಿ ಪ್ರತಿಭಟನೆ ಮಾಡಿದ್ದಾರೆ. ನರಗುಂದ ಮಿನಿ ವಿಧಾನಸೌಧದ ಬಳಿ ಮಾಜಿ ಸಚಿವ ಬಿ.ಆರ್ ಯಾವಗಲ್ ಹಾಗೂ ಪಕ್ಷದ ಕಾರ್ಯಕರ್ತರು ಅನಿರ್ದಿಷ್ಟ ಹೋರಾಟ ನಡೆಸಿದ್ದಾರೆ.
Advertisement
Advertisement
ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡ ಸಂತ್ರಸ್ತರಿಗೆ ಕಡಿಮೆ ಪ್ರಮಾಣದ ಮನೆ ಬಿದ್ದರೂ ‘ಎ’ ಗ್ರೇಡ್ ಹಾಕಿ ಹೆಚ್ಚಿಗೆ ಪರಿಹಾರ ನೀಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ಫಲಾನುಭವಿಗಳ ಮನೆ ಸಂಪೂರ್ಣ ಬಿದ್ದರೂ ‘ಬಿ’ ಅಥವಾ ‘ಸಿ’ ಗ್ರೇಡ್ ಹಾಕುತ್ತಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಆದರೆ, ಇದೆಲ್ಲಾ ಶುದ್ಧ ಸುಳ್ಳು. ಸಂತ್ರಸ್ತರ ವಿಚಾರದಲ್ಲಿ ರಾಜಕೀಯ ಮಾಡಿಲ್ಲ, ಮಾಡೋದೂ ಇಲ್ಲ. ಹಿರಿಯರಾಗಿ ಇಂತಹ ಆರೋಪ ಮಾಡಬಾರದು. ನೆರೆಪರಿಹಾರ ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡ್ತಿದ್ದೇವೆ ಅಂತ ಸಚಿವ ಸಿ.ಸಿ ಪಾಟೀಲ್ ಅವರು ತಮ್ಮ ಮನೆ ದೇವರಾದ ಶ್ರೀಶೈಲ ಮಲ್ಲಿಕಾರ್ಜುನ ದೇವರ ಆಣೆ ಮಾಡಿ ಆರೋಪ ತಳ್ಳಿ ಹಾಕಿದ್ದಾರೆ.
ಸಂತ್ರಸ್ತರು ಪ್ರವಾಹದ ಸಂಕಷ್ಟದಿಂದ ಇನ್ನೂ ಚೇತರಿಸಿಕೊಳ್ಳದೆ ಒದ್ದಾಡುತ್ತಿದ್ದಾರೆ. ಆದರೆ ರಾಜಕೀಯ ನಾಯಕರು ಇವರನ್ನ ವೋಟ್ ಬ್ಯಾಂಕ್ ಮಾಡಿಕೊಳ್ಳುತ್ತಿದ್ದಾರೆ. ಆಡಳಿತ ಹಾಗೂ ವಿರೋಧ ಪಕ್ಷದವರು ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ನೆರೆ ಪರಿಹಾರ ಕಿತ್ತಾಟ ಒಂದು ರೀತಿ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಆಗುತ್ತಿದೆ ಎಂದು ಸಂತ್ರಸ್ತರು ಅಳಲನ್ನು ತೋಡಿಕೊಂಡಿದ್ದಾರೆ.