Connect with us

Districts

ನಮ್ಮಲ್ಲಿ ವ್ಯವಸಾಯ ಹಾಳಾಗುವುದಕ್ಕೂ ರಾಜಕಾರಣಿಗಳು ಕಾರಣ: ಎಸ್.ಎಲ್ ಭೈರಪ್ಪ

Published

on

– ಚಾಮುಂಡಿ ಬೆಟ್ಟ ಟೂರಿಸ್ಟ್ ಸ್ಪಾಟಾ ಅಥವಾ ಧಾರ್ಮಿಕ ಕೇಂದ್ರವೇ?
– ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನ ಕೊಟ್ಟಿದ್ದೇವೆ ಎಂದರು.

ಮೈಸೂರು: ನಮ್ಮಲ್ಲಿ ವ್ಯವಸಾಯ ಹಾಳಾಗುವುದಕ್ಕೂ ರಾಜಕಾರಣಿಗಳು ಎಂದು ಎಸ್.ಎಲ್ ಭೈರಪ್ಪ ಹೇಳಿದ್ದಾರೆ.

ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಉದ್ಘಾಟನಾ ಭಾಷಣ ಮಾಡಿದ ಅವರು, ಹಳ್ಳಿ ಕಡೆಯಲ್ಲಿ ಸ್ಪಲ್ಪ ತಂಪು ಇರುವಾಗ ಹೊಲದ ಕೆಲಸ ಮಗಿಸುತ್ತಾರೆ. ಆದರೆ ಚುನಾವಣೆ ಬಂದ ಮೇಲೆ ಆ ವ್ಯವಸ್ಥೆ ಬಹುತೇಕ ಕಡೆ ಮರೆಯಾಗಿದೆ. ಕಾಯಕ ನಿಷ್ಠೆ ಕಡಿಮೆಯಾಗುತ್ತಿದೆ. ಆದ್ದರಿಂದ ನಮ್ಮಲ್ಲಿ ವ್ಯವಸಾಯ ಹಾಳಾಗುತ್ತಿರುವುದಕ್ಕೆ ರಾಜಕಾರಣಿಗಳು ಕಾರಣ ಎಂದು ಹೇಳಿದರು. ಇದನ್ನೂ ಓದಿ: ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅಗೌರವ

ಬಸವಣ್ಣನವರು ಕಾಯಕ ನಿಷ್ಠೆ, ಜಾತಿ ವಿನಾಶ ಬಗ್ಗೆ ಮಾತಾಡಿದರು. ಅನ್ಯ ಜಾತಿ ನಡುವೆ ಮದುವೆ ಮಾಡಿದರು. ಜಾತಿ ವಿನಾಶದ ಕಲ್ಪನೆ ಬಹಳ ಒಳ್ಳೆಯದು. ಆದರೆ ಅವತ್ತಿನ ಕಾಲಕ್ಕೆ ಜನ ಅದನ್ನು ಒಪ್ಪಿಕೊಳ್ಳುವ ಸ್ಥಿತಿ ಇರಲಿಲ್ಲ. ಅವತ್ತು ಸಮಾಜ ಅದಕ್ಕೆ ಪಕ್ವ ಇರಲಿಲ್ಲ. ಆಗ ಗಂಡು ಹೆಣ್ಣಿನ ನಡುವೆ ಆರ್ಥಿಕ ಸಮಾನತೆ ಬಂದಿದೆ. ಈಗ ಜಾತಿ ಮೀರಿ ಪ್ರೀತಿಸಿ ಮದುವೆಗಳು ನಡೆಯುತ್ತಿವೆ. ಬಸವಣ್ಣನವರ ಜಾತಿ ವಿನಾಶದ ತತ್ವ ಪರಿಪಾಲನೆಗೆ ಈಗ ಕಾಲ ಪಕ್ವ ಆಗಿದೆ. ಹಾಗಂತ ಬಲವಂತವಾಗಿ ಅಂತರ್ಜಾತಿ ವಿವಾಹ ಮಾಡಿಸುತ್ತೇನೆ ಎಂದು ಯಾರು ಹೋಗಬಾರದು. ಸಾಹಿತಿಗಳು ಬಸವಣ್ಣನವರು ಆಲೋಚನೆ ಜಾರಿಗೆ ತರುವುದಕ್ಕೆ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಲಿಂಗಾಯತ, ವೀರಶೈವ ಎಂದು ಚರ್ಚೆಗೆ ಇಳಿಯಬಾರದು ಎಂದು ಕಿವಿ ಮಾತು ಹೇಳಿದರು.

ಚಾಮುಂಡಿ ಬೆಟ್ಟಕ್ಕೆ ಬರೋದು ದೇವರ ದರ್ಶನಕ್ಕೋ ಶಾಂಪಿಂಗ್‍ಗೋ? ಚಾಮುಂಡಿ ಬೆಟ್ಟ ಟೂರಿಸ್ಟ್ ಸ್ಪಾಟಾ ಅಥವಾ ಧಾರ್ಮಿಕ ಕೇಂದ್ರವಾ? ಶಾಂಪಿಂಗ್ ಮಾಡಲು ಮೈಸೂರು ನಗರದ ಒಳಗೆ ವ್ಯವಸ್ಥೆ ಇಲ್ವಾ ಎಂದು ಪ್ರಶ್ನಿಸಿದರು. ಶಾಂತಿಯಿಂದ ದೇವರನ್ನು ಪ್ರಾರ್ಥಿಸಲು ಅನುಕೂಲವಾಗಲಿ, ಮನಸ್ಸಿಗೆ ಶಾಂತಿ ಸಿಗಲಿ ಎಂದು ದೇವಸ್ಥಾನ, ಗುಡಿಗಳನ್ನು ಮಾಡಿದ್ದಾರೆ. ಆದರೆ ಈಗ ಹಲವಾರು ಕಡೆ ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸಿ ತಾಣವಾಗಿ ಮಾಡಿಬಿಟ್ಟಿದ್ದಾರೆ. ವಾಣಿಜ್ಯ ಮಳಿಗೆಗಳು, ಅದು, ಇದು ಎಂದು ಸಾಕಷ್ಟು ಅಂಗಡಿಗಳು, ಪ್ರವಾಸಿಗರು ಬರುತ್ತಾರೆ. ಈ ಗಲಾಟೆಯ ಮಧ್ಯೆ ಶಾಂತಿ ಎಲ್ಲಿ ಸಿಗುತ್ತೆ ಎಂದು ಚಾಮುಂಡಿ ಬೆಟ್ಟದಲ್ಲಿ ಹೊಸ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಭೈರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕೆಲವರು ನೀವು ವಿಚಾರವಾದಿಗಳು ದೇವರ ಮೇಲೆ ನಂಬಿಕೆ ಇಲ್ಲ ಎಂದಿದ್ದರು. ಆದರೆ ದೇವರ ಮೇಲೆ ನಂಬಿಕೆ ಇಲ್ಲ ಎಂದು ನಾನು ಎಂದೂ ಹೇಳಿಲ್ಲ. ದೇವರು ಇದ್ದನಾ? ಇಲ್ಲವಾ? ಎಂದು ತಿಳಿಸಲು ಒಂದು ಬಾಲಕ ಹಾಗೂ ಸೂಜಿಯ ಕಥೆ ಹೇಳಿದರು. ಬಳಿಕ ದೇವರಿಗೆ ಎಂದು ಲಿಂಗ ಭೇದ ಮಾಡಬಾರದು. ದೇವರು ಇದ್ದಾನೆಯೇ? ಇದ್ದಾಳೇಯೇ? ಎನ್ನುವುದಕ್ಕಿಂತ ದೇವರು ಇದೇಯೇ ಎಂದು ಕೇಳಬೇಕಿದೆ. ವಿಚಾರವಾದಿಗಳಿಗೆ ಕೇಳಿದರೆ ಇಲ್ಲ ಎಂದು ಹೇಳುತ್ತಾರೆ. ವಿಚಾರವಾದಿಗಳು ದೇವರು ಇಲ್ಲ ಅನ್ನೋದು ಉದ್ಧಟತನದ ಮಾತು ಎಂದು ದಸರಾ ಉದ್ಘಾಟಿಸಿ, ಭೈರಪ್ಪ ಅವರು ದೇವರ ಬಗ್ಗೆ ಉಲ್ಲೇಖಿಸಿದರು.

 

ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ದೇವತೆ ಪ್ರಧಾನವಾದದ್ದು, ಪ್ರತಿ ಊರಲ್ಲೂ ಗ್ರಾಮದೇವತೆ ಇರುತ್ತೆ. ಹೆಣ್ಣನ್ನು ದೇವರ ರೂಪದಲ್ಲಿ ನೋಡುತ್ತೇವೆ ಎನ್ನುವುದು ಇದರ ಅರ್ಥ. ಮೊದಲು ತಾಯಿಗೆ ನಮಸ್ಕರಿಸಿ ನಂತರ ತಂದೆಗೆ ನಮಸ್ಕರಿಸುವ ಪದ್ಧತಿ ಇದೆ. ಆದರೂ, ನಮ್ಮ ದೇಶದಲ್ಲಿ ಹೆಣ್ಣಿಗೆ ಗೌರವ ಇಲ್ಲ ಎಂದು ಕೆಲವರು ಹೇಳುತ್ತಾರೆ. ಹೆಣ್ಣನ್ನು ತುಳಿಯುವ ಸಮಾಜವಿದು ಎಂದು ವಿನಾಃಕಾರಣ ಹೇಳುತ್ತಾರೆ. ಆದರೆ ನಮ್ಮಲ್ಲಿ ಪುರುಷ ದಬ್ಬಾಳಿಕೆ ಇಲ್ಲ. ನಮ್ಮ ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನ ಕೊಟ್ಟಿದ್ದೇವೆ ಎಂದರು.

ಇದೇ ವೇಳೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವಿಲ್ಲ ಎಂಬ ವಿಚಾರವಾಗಿ ಮಾತನಾಡಿ, ಅದು ಆ ದೇವಸ್ಥಾನದ ಆಚಾರ-ವಿಚಾರ. ಇದನ್ನು ಪ್ರಶ್ನಿಸಿ ಕೆಲವು ವಿಚಾರವಾದಿಗಳು ನ್ಯಾಯಾಲಯಕ್ಕೆ ಹೋದರು. ಕೆಲವರು ಬಲವಂತವಾಗಿ ಕೆಲ ಮಹಿಳೆಯರನ್ನು ದೇವಸ್ಥಾನದ ಒಳಗೆ ನುಗ್ಗಿಸಿದರು. ಆ ನುಗ್ಗಿಸಿದ ಮಹಿಳೆಯರಲ್ಲಿ ಒಬ್ಬ ಮುಸ್ಲಿಂ ಇದ್ದರು. ನಂತರ, ಆಕೆಗೆ ಆ ಧರ್ಮದಿಂದ ಹೊರಗೆ ಹಾಕ್ತಿವಿ ಎಂದು ಎಚ್ಚರಿಸಿದ್ದರು. ಸರ್ಕಾರ ಧಾರ್ಮಿಕ ವಿಚಾರಕ್ಕೆ ಏಕೆ ಹೋಗಬೇಕು? ಸಮಾನತೆ ಕಲ್ಪನೆ ಯಾವತ್ತೂ ಒಂದೇ ಥರದಲ್ಲಿ ಇರುವುದಿಲ್ಲ ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *