ಬೆಂಗಳೂರು: ಎಲೆಕ್ಷನ್ ಬಂದ್ರೆ ಗೂಬೆಗಳಿಗೆ ಕಂಟಕವಾದ್ರೆ, ಕಾಡುಪಾಪ-ಆಮೆಗಳ ಪ್ರಾಣಹರಣವಾಗುತ್ತೆ. ಅಚ್ಚರಿಯಾದ್ರೂ ಇದು ಘೋರ ಸತ್ಯ. ರಾಜಕೀಯ ಚದುರಂಗದಾಟಕ್ಕೆ ಆಮೆ, ಗೂಬೆ, ಕಾಡುಪಾಪ ವಿಲವಿಲನೆ ಒದ್ದಾಡಿ ಕೊನೆಯುಸಿರೆಳೆಯುತ್ತವಂತೆ. ಇದು ಖುದ್ದು ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋದವರು ಪಬ್ಲಿಕ್ ಟಿವಿಗೆ ಕೊಟ್ಟ ಶಾಕಿಂಗ್ ಮಾಹಿತಿ.
ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಬೆಂಗಳೂರಿನಲ್ಲಿ ಗೂಬೆಗಳ ಮಾರಾಟ ದಂಧೆ ಜೋರಾಗಿ ನಡೆಯುತ್ತಿದೆ. ಕಾಡುಪಾಪ, ಆಮೆಗಳನ್ನು ಕೂಡ ಕೂಡಿ ಹಾಕಿ ರಾಜಕೀಯ ನೇತಾರರ ಮನೆಗೆ ಕಳಿಸೋದಕ್ಕೆ ಮಾಫಿಯಾದ ಟೀಮ್ ರೆಡಿಯಾಗಿ ನಿಂತಿವೆ ಎಂಬ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.
ಗೂಬೆಗೂ ಪಾಲಿಟಿಕ್ಸ್ ಗೂ ಲಿಂಕ್ ಹೇಗೆ?: ಸಾಮಾನ್ಯವಾಗಿ ಗೂಬೆ ಅಂದ್ರೆ ಅಪಶಕುನ. ಆದ್ರೆ ರಾಜಕೀಯಕ್ಕೂ ಈ ಗೂಬೆ ಮಾರಾಟಕ್ಕೂ ಲಿಂಕ್ ಏನಂದ್ರೆ ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಪ್ರತಿಸ್ಪರ್ಧಿಯ ಮನಸ್ಸು ಕುಗ್ಗಿಸಲು, ಮಾನಸಿಕವಾಗಿ ಹಿಂಸೆ ನೀಡಲು ಗೂಬೆಗಳ ರೆಕ್ಕೆ ಕತ್ತರಿಸಿ ಅದನ್ನು ರಾಜಕೀಯ ನಾಯಕರ ಮನೆಯ ಬಳಿಯೋ ಅಥವಾ ಅವರ ಕಚೇರಿಗೋ ಬಿಟ್ಟು ಬಿಡುತ್ತಾರಂತೆ. ಇದ್ರಿಂದ ಧೃತಿಗೆಟ್ಟ ಅದೆಷ್ಟೋ ನಾಯಕರು ಕೋಟಿ ಕೋಟಿ ಖರ್ಚು ಮಾಡಿ ಜ್ಯೋತಿಷ್ಯ, ದೇವರ ಮೊರೆ ಹೋಗುತ್ತಾರಂತೆ. ಬೆಂಗಳೂರಿನ ಶಿವಾಜಿನಗರ ಟ್ಯಾನರಿ ರೋಡ್‍ನಲ್ಲಿ ಈಗಾಗಲೇ ಗೂಬೆಗಳನ್ನು ಒಟ್ಟುಹಾಕುವ ಕೆಲಸವನ್ನು ಮಾಫಿಯಾದ ಕೈಗಳು ಮಾಡುತ್ತಿದೆ ಅನ್ನೋ ಮಾಹಿತಿ ಲಭಿಸಿದೆ.
ಎಲೆಕ್ಷನ್ ಬಂತು ಅಂದ್ರೆ ಕಾಡುಪಾಪಗಳಿಗೆ, ಆಮೆಗೆ ಸಾವಿನ ಭಾಗ್ಯ! ತನಗಾಗದವನನ್ನು ನರಳಿಸೋದಕ್ಕೆ ಕಾಡುಪಾಪವನ್ನು ಮಾಟ ಮಂತ್ರಕ್ಕೆ ಬಳಸುತ್ತಾರೆ. ಕಾಡುಪಾಪದ ಕೈ, ಕಾಲನ್ನು ಹಗ್ಗದಿಂದ ಅಥವಾ ವೈರ್‍ನಿಂದ ಕಟ್ಟಿ ಹಾಕಿ ಅದಕ್ಕೆ ಊಟ ನೀರು ಕೊಡದೆ ಚಿತ್ರ ಹಿಂಸೆ ಕೊಡ್ತಾರೆ. ಇಲ್ಲಿ ಪ್ರಾಣಿ ನರಳಿದಷ್ಟು ಎದುರಾಳಿಗೆ ಹಿಂಸೆ ಸಿಗುತ್ತೆ ಅನ್ನೋ ವಿಚಿತ್ರ ನಂಬಿಕೆ.
ಕಳೆದ ವರ್ಷ ಮೂವತ್ತು ಕಾಡುಪಾಪ, ಆಮೆ, ಗೂಬೆಗಳು ಸಾವನ್ನಪ್ಪಿದ್ದು ಈಗಾಗಲೇ ಈ ಬಾರಿಯ ಎಲೆಕ್ಷನ್‍ಗೂ ಈ ಮಾಫಿಯಾ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಅರಣ್ಯ ಘಟಕದವರು ಈಗಾಗಲೇ ಸಾಕಷ್ಟು ಕಡೆ ರೇಡ್ ಮಾಡಿ ಈ ಮಾಫಿಯಾಗೆ ಬ್ರೇಕ್ ಹಾಕೋದಕ್ಕೆ ಮುಂದಾಗಿದ್ದಾರೆ. ವಿಚಿತ್ರ ಅಂದ್ರೆ ಇಲ್ಲಿ ಈ ಪ್ರಾಣಿ, ಪಕ್ಷಿಗಳನ್ನು ಹಿಡಿದುಕೊಡುವವರು ಕಾಡಿನಲ್ಲಿ ವಾಸಿಸೋ ಆದಿವಾಸಿಗಳು ಎಂದು ತಿಳಿದುಬಂದಿದೆ.