ಬೆಂಗಳೂರು: ನಗರದಲ್ಲಿ ಸರಗಳ್ಳವರ ಹಾವಳಿಗೆ ಕೊನೆಯೇ ಇಲ್ಲ ಎನ್ನುವುದಕ್ಕೆ ಇಂದು ಮತ್ತೊಮ್ಮೆ ಸಾಕ್ಷಿಯಾಗಿದೆ. ನಗರದ ಮೂರು ಕಡೆಗಳಲ್ಲಿ ಸರಗಳ್ಳತನ ಪ್ರಕರಣ ನಡೆದಿದೆ.
ಸಂಕ್ರಾಂತಿ ಹಬ್ಬದ ದಿನವಾದ ಇಂದೇ ಪೊಲೀಸ್ ಇನ್ಸ್ ಪೆಕ್ಟರ್ ಪತ್ನಿಯದ್ದೇ ಸರಗಳ್ಳತನ ಮಾಡಿದ ಘಟನೆ ಬೆಂಗಳೂರಿನ ಪೀಣ್ಯದ ಎಚ್‍ಎಮ್‍ಟಿ ಲೇಔಟ್‍ನಲ್ಲಿ ನಡೆದ್ರೆ, ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೌಗಂಧಿಕ 45 ಗ್ರಾಂ ಸರ ಕಸಿದು ಪರಾರಿಯಾಗಿದ್ದಾರೆ.
ಇನ್ಸ್ ಪೆಕ್ಟರ್ ಕೆಂಚೇಗೌಡ ಪತ್ನಿ ಗಂಗಮ್ಮ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ವೇಳೆ ಏಕಾಏಕಿ ಮಹಿಳೆಯ ಮೇಲೆರಗಿದ ಸರಗಳ್ಳ ಕತ್ತಿಗೆ ಕೈ ಹಾಕಿ ಮಹಿಳೆ ಸಮೇತ 70 ಗ್ರಾಂ ಸರವನ್ನು ಎಳೆದೊಯ್ದಿದ್ದಾನೆ. ಕಳ್ಳ ಸರ ಎಳೆಯುವ ವೇಳೆ ಮಹಿಳೆ ನೆಲಕ್ಕೆ ಬಿದ್ದರೂ ಬಿಡದ ಸರಗಳ್ಳ ಕೊನೆಗೆ ಸರ ಕಸಿದು ಎಸ್ಕೇಪ್ ಆಗಿದ್ದಾನೆ.
ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಕಳ್ಳನನ್ನು ಒಂದು ಕಿಲೋಮೀಟರ್‍ನಷ್ಟು ದೂರ ಇನ್ಸ್ ಪೆಕ್ಟರ್ ಕೆಂಚೇಗೌಡ ಓಡಿ ಬೆನ್ನತ್ತಿದ್ದಾರೆ. ಆದರೂ ಆತ ಕೂದಳೆಲೆ ಅಂತರದಲ್ಲಿ ಓಡಿ ಪಲ್ಸರ್‍ನಲ್ಲಿ ಪರಾರಿಯಾಗಿದ್ದಾನೆ.
ಪೀಣ್ಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಆದ್ರೆ ಶಾರದಮ್ಮನ ಸಮಯ ಪ್ರಜ್ಞೆಯಿಂದ ಕಳ್ಳತನ ಕೈ ತಪ್ಪಿದೆ. 80 ಗ್ರಾಂ ತೂಕದ ಸರಗಳ್ಳತನಕ್ಕೆ ಯತ್ನಿಸಿದ್ದು, ಪತಿ ಹನುಮಂತರಾಯಪ್ಪ ಪತ್ನಿಯ ರಕ್ಷಣೆಗೆ ಧಾವಿಸಿದ್ದಾರೆ. ಪರಿಣಾಮ ಸರಗಳ್ಳತನ ಕೈತಪ್ಪಿದ್ದು, ಪತ್ನಿಯ ರಕ್ಷಣೆಗೆ ಬಂದ ಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬುದಾಗಿ ತಿಳಿದುಬಂದಿದೆ.
ಈ ಮೂರು ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.youtube.com/watch?v=70qyeBboCWY