ಬೆಂಗಳೂರು: ಬುಧವಾರ ರಾತ್ರಿ ರೆಸಾರ್ಟಿನಿಂದ ನಾಪತ್ತೆಯಾಗಿ ಮುಂಬೈ ಆಸ್ಪತ್ರೆ ಸೇರಿದ್ದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಗ್ರಹಚಾರ ಕೆಟ್ಟ ಹಾಗಿದೆ. ಅವರು ಕಳುಹಿಸಿದ್ದ ಚಿಕಿತ್ಸೆಯ ವಿಡಿಯೋ ಮತ್ತು ಫೋಟೋಗಳೇ ಅವರಿಗೆ ಮುಳುವಾಗುವ ಸಾಧ್ಯತೆ ಇದೆ. ಯಾಕಂದರೆ ಈ ಬಗ್ಗೆ ತನಿಖೆ ನಡೆಸುವಂತೆ ಸದನದಲ್ಲೇ ಗೃಹ ಸಚಿವರಿಗೆ ಸ್ಪೀಕರ್ ಸೂಚಿಸಿದ್ದಾರೆ.
ಕುಟುಂಬದವರ ಹೇಳಿಕೆ, ಫೋಟೋ, ವಿಡಿಯೋ ಆಧರಿಸಿ ಅನಾರೋಗ್ಯ ಅನ್ನೋದನ್ನು ದೃಢಪಡಿಸಿದರೆ ಶ್ರೀಮಂತ್ ಪಾಟೀಲ್ ಬಚಾವ್ ಆಗಬಹುದು. ಆದರೆ ಆಳಕ್ಕೆ ಇಳಿದು ತನಿಖೆ ನಡೆಸಿ ಬೇರೆ ರೀತಿಯಲ್ಲೇ ವರದಿ ಬಂದರೆ ಶ್ರೀಮಂತ್ ಪಾಟೀಲ್ ವಿರುದ್ಧವೂ ಅನರ್ಹತೆ ಅಸ್ತ್ರ ಪ್ರಯೋಗವಾಗಬಹುದು. ಇದನ್ನೂ ಓದಿ: ಬಿಜೆಪಿಯಿಂದ ಶ್ರೀಮಂತ ಪಾಟೀಲ್ ಅಪಹರಣ: ಕಾಂಗ್ರೆಸ್
Advertisement
Advertisement
ಈ ನಡುವೆ ವಿಧಾನಸೌಧ ಠಾಣೆಯಲ್ಲಿ ಶ್ರೀಮಂತ್ ಪಾಟೀಲ್ ಕಿಡ್ನಾಪ್ ಆಗಿದ್ದಾರೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಹೀಗಾಗಿ ಈಗಾಗಲೇ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ತನಿಖಾ ತಂಡ ಮುಂಬೈಗೆ ತೆರಳಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಶ್ರೀಮಂತ್ ಪಾಟೀಲ್ ಹೇಳಿಕೆ ಪಡೆಯಲಿದೆ.
Advertisement
Advertisement
ನಡೆದಿದ್ದೇನು?
ಗುರುವಾರ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುರಿತು ಖುದ್ದಾಗಿ ಶಾಸಕ ಶ್ರೀಮಂತ್ ಪಾಟೀಲ್ ಅವರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವೈಯಕ್ತಿಕ ಕೆಲಸದ ನಿಮಿತ್ತ ಬುಧವಾರ ಚೆನ್ನೈಗೆ ಹೋಗಿದ್ದೆ. ಅಲ್ಲಿ ನನಗೆ ಎದೆ ನೋವು ಕಾಣಿಸಿಕೊಂಡಿತ್ತು. ಚೆನ್ನೈನಲ್ಲಿ ಯಾವ ಆಸ್ಪತ್ರೆಗೆ ದಾಖಲಾಗಬೇಕು ಎನ್ನುವುದು ತಿಳಿಯಲಿಲ್ಲ. ಹೀಗಾಗಿ ತಕ್ಷಣವೇ ಅಲ್ಲಿಂದ ಮುಂಬೈಗೆ ಬಂದೆವು ಎಂದು ಶಾಸಕರು ಹೇಳಿದ್ದರು.
ಮುಂಬೈನ ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡೆ. ಆದರೆ ವೈದ್ಯರು ನೀವು ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ನೀಡಿ, ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನನಗೆ ಇನ್ನೂ ಸ್ವಲ್ಪ ಎದೆ ನೋವು ಇದೆ ಎಂದು ಶಾಸಕರು ತಿಳಿಸಿದ್ದರು.
ಶ್ರೀಮಂತ್ ಪಾಟೀಲ್ ಅವರು ಗುರುವಾರ ನಡೆದ ವಿಶ್ವಾಸ ಮತಯಾಚನೆ ಚರ್ಚೆಗೆ ಹಾಜರಾಗಿರಲಿಲ್ಲ. ಹೀಗಾಗಿ ಬಿಜೆಪಿಯವರೇ ಶಾಸಕರನ್ನು ಅಪಹರಿಸಿದ್ದಾರೆ ಎಂದು ಸಚಿವ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಮೈತ್ರಿ ನಾಯಕರು ಆರೋಪಿಸಿದ್ದರು. ಅಷ್ಟೇ ಅಲ್ಲದೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ಫೋಟೋಗಳನ್ನು ಹಿಡಿದು, ಇದು ಸುಳ್ಳು ಎಂದು ಹೇಳಿದ್ದರು.