Recent News

ಬಿಜೆಪಿಯಿಂದ ಶ್ರೀಮಂತ ಪಾಟೀಲ್ ಅಪಹರಣ: ಕಾಂಗ್ರೆಸ್

ಬೆಂಗಳೂರು: ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಅಪಹರಿಸಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿ, ಸದನಕ್ಕೆ ಕೆಲ ಸಾಕ್ಷಿ ನೀಡಿದರು.

ಸಾಕ್ಷಿ ನೀಡಿದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬುಧವಾರ ನಮ್ಮ ಜೊತೆಯಲ್ಲಿದ್ದ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿ ಅಪಹರಿಸಿದೆ. ಬೆಂಗಳೂರಿನಿಂದ ಚೆನ್ನೈಗೆ, ಮತ್ತೆ ಬೆಳಗ್ಗೆ ಚೆನ್ನೈನಿಂದ ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ. ಇದೀಗ ಆಸ್ಪತ್ರೆಗೆ ದಾಖಲಾಗಿರುವ ಫೋಟೋಗಳನ್ನು ಹರಿಬಿಡಲಾಗಿದೆ. ನಮ್ಮ ಶಾಸಕರ ಜೊತೆ ಬಿಜೆಪಿಯ ಲಕ್ಷ್ಮಣ್ ಸವದಿ ಹಾಗೂ ಇತರೆ ನಾಯಕರು ಪ್ರಯಾಣಿಸಿದ್ದಾರೆಂದು ವಿಮಾನಯಾನದ ಟಿಕೆಟ್ ನೀಡಿದರು.

ಕಾಂಗ್ರೆಸ್ ಆರೋಪಕ್ಕೆ ಸಹಜವಾಗಿ ಬಿಜೆಪಿ ನಾಯಕರು ಸಿಡಿಮಿಡಿಗೊಂಡು ಯಾರು ನಮ್ಮ ವಶದಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಕೆಲಕಾಲ ಅಧಿವೇಶನ ಗೊಂದಲದ ಗೂಡಾಗಿ ಮಾರ್ಪಟ್ಟಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಿಟಿ ರವಿ, ಶ್ರೀಮಂತ ಪಾಟೀಲ್ ಇಲ್ಲಿಯವರೆಗೆ ಯಾರ ಕಸ್ಟಡಿಯಲ್ಲಿದ್ದರು? ಸಿಎಂ ನಿಮ್ಮವರು, ಗೃಹ ಸಚಿವರು ನಿಮ್ಮವರೇ ಆಗಿರುವಾಗ ಕಿಡ್ನಾಪ್ ಆಗಲು ಹೇಗೆ ಸಾಧ್ಯ ಎಂದು ತಿರುಗೇಟು ನೀಡಿದರು.

ಈ ವೇಳೆ ಮಾತನಾಡಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡರು, ಇದ್ದಕ್ಕಿದ್ದಂತೆ ಶಾಸಕರು ಇಲ್ಲ ಅಂದ್ರೆ ಏನರ್ಥ. ಹಾಗಾಗಿ ನೀವು ನಮಗೆ ರಕ್ಷಣೆ ನೀಡಬೇಕೆಂದು ಸ್ಪೀಕರ್ ಬಳಿ ಮನವಿ ಮಾಡಿಕೊಂಡರು.

ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯನವರು ಈಗಾಗಲೇ ಶ್ರೀಮಂತ್ ಪಾಟೀಲ್ ಗೈರಿಗೆ ಸಂಬಂಧಿಸಿದಂತೆ ಪತ್ರವನ್ನು ನೀಡಿದ್ದಾರೆ. ಪತ್ರ ಶಾಸಕರ ಲೆಟರ್ ಹೆಡ್ ನಲ್ಲಿಯೂ ಇಲ್ಲ. ದಿನಾಂಕ ಸಹ ನಮೂದಿಸಿಲ್ಲ. ಕೂಡಲೇ ಪೊಲೀಸರು ಶ್ರೀಮಂತ್ ಪಾಟೀಲ್ ಕುಟುಂಬಸ್ಥರನ್ನು ಸಂಪರ್ಕಿಸಿ ನಾಳೆ ನನಗೆ ಮಾಹಿತಿ ನೀಡಬೇಕೆಂದು ಗೃಹ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಸೂಚಿಸಿದ್ದಾರೆ.

ಕಾಂಗ್ರೆಸ್ ಟ್ವೀಟ್:
ದಿನೇಶ್ ಗುಂಡೂರಾವ್ ಸದನದಲ್ಲಿ ಮಾತನಾಡುತ್ತಿರುವ ಮಾಧ್ಯಮಗಳ ಫೋಟೋ ಹಾಕಿ, ಶ್ರೀಮಂತ ಪಾಟೀಲ್ ಅವರೊಂದಿಗೆ ನಿನ್ನೆ ಚರ್ಚೆ ಮಾಡಿದ್ದೇವೆ. ಅವರು ಆರೋಗ್ಯ ಚೆನ್ನಾಗಿಯೇ ಇದ್ದರು. ಆದರೂ ಬಿಜೆಪಿಯವರೇ ಅವರನ್ನು ರೆಸಾರ್ಟ್ ನಿಂದ ಅಪಹರಿಸಿದ್ದಾರೆ. ಹೃದಯ ಸಂಬಂಧಿ ಕಾಯಿಲೆ ಇರುವವರು ಚೆನೈಗೆ ಹೋಗಿ, ಮುಂಬೈಗೆ ಹೋಗಲು ಹೇಗೆ ಸಾಧ್ಯ? ಪಕ್ಕದಲ್ಲೇ ಆಸ್ಪತ್ರೆ ಇದ್ದರೂ ಮುಂಬೈಗೆ ಹೋಗಿದ್ದು ಏಕೆ ಎಂದು ಪ್ರಶ್ನಿಸಿದೆ.

ರಾತ್ರೋರಾತ್ರಿ ವಿಶೇಷ ವಿಮಾನದಲ್ಲಿ ಲಕ್ಷ್ಮಣ್ ಸವದಿಯವರು ಶ್ರೀಮಂತ ಪಾಟೀಲ್ ಅವರನ್ನು ಮುಂಬೈಗೆ ಕರೆದೊಯ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆ ನೀಡುವೆ. ಶಾಸಕರ ಅಪಹರಣ ಆಗುತ್ತಿದೆ, ಶಾಸಕರಿಗೆ ರಕ್ಷಣೆ ನೀಡಬೇಕು. ಅಪಹರಿಸಿರುವ ಶಾಸಕರನ್ನು ಹಿಂದಕ್ಕೆ ಕರೆದುಕೊಂಡು ಬರಬೇಕೆಂದು ಕಾಂಗ್ರೆಸ್ ಪರವಾಗಿ ವಿನಂತಿಸುವೆ ಎಂದು ಗುಂಡೂರಾವ್ ನೀಡಿದ ಹೇಳಿಕೆಯನ್ನು ಬರೆದು ಟ್ವೀಟ್ ಮಾಡಿದೆ.

Leave a Reply

Your email address will not be published. Required fields are marked *