ಮಡಿಕೇರಿ: ಶುಕ್ರವಾರ ತಡರಾತ್ರಿ ಕೊಡಗು ಜಿಲ್ಲೆ ಕುಶಾಲನಗರ ಪಟ್ಟಣದಲ್ಲಿ ಎಲ್ಲ ವ್ಯಾಪಾರ ವಹಿವಾಟುಗಳು ಮುಗಿದು ಇಡೀ ಪಟ್ಟಣವೇ ಬಂದ್ ಆಗಿದ್ದ ಹೊತ್ತು. ಆ ಹೊತ್ತಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಒಂದು ಸೂಟ್ಕೇಸ್ ಇರೋದು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಸೋಮಶೇಖರ್ ಕಣ್ಣಿಗೆ ಬಿದ್ದಿತ್ತು.
ಹೆದ್ದಾರಿಯಲ್ಲಿ, ಅದು ಪೆಟ್ರೋಲ್ ಬಂಕ್ ಪಕ್ಕದಲ್ಲಿ ಸೂಟ್ಕೇಸ್ ಇದ್ದದ್ದು, ಯುವಕನನ್ನು ಸಂಪೂರ್ಣ ಆತಂಕಕ್ಕೆ ದೂಡಿತ್ತು. ಸೂಟ್ಕೇಸನ್ನು ತೆಗೆದುಕೊಳ್ಳುವ ಮನಸ್ಸಾಗದ ಯುವಕ ಸೋಮಶೇಖರ್, ಕುಶಾಲನಗರ ಪಟ್ಟಣದ ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್ ವಾರ್‌ನಲ್ಲಿ ಸೇವಾ ಗನ್ ಬಳಸಿ ಇಬ್ಬರು ಪೊಲೀಸರು ಪರಾರಿ
ಕಾದಿತ್ತು ಅಚ್ಚರಿ!
ಹೆದ್ದಾರಿ ಪಕ್ಕದಲ್ಲಿದ್ದ ಸೂಟ್ಕೇಸ್‍ನ್ನು ಸಾಕಷ್ಟು ಪರಿಶೀಲಿಸಿದ ಪೊಲೀಸರು ಯಾವುದೇ ಅಪಾಯವಿಲ್ಲ ಎಂದರಿತು ಬಳಿಕ ತಮ್ಮ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದರು. ನಂತರ ಸೂಟ್ಕೇಸ್ ತೆಗೆದು ಪರಿಶೀಲಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಹೌದು ಸೂಟ್ಕೇಸಿನಲ್ಲಿ ನಾಲ್ಕುವರೆ ಲಕ್ಷ ರೂ. ಮೌಲ್ಯದ 100 ಗ್ರಾಮ ಚಿನ್ನಾಭರಣ, ಮೂರು ಸಾವಿರ ನಗದು ಇತ್ತು. ಇನ್ನಷ್ಟು ತಡಕಾಡಿದ ಪೊಲೀಸರಿಗೆ ಅದರಲ್ಲಿ ಮಹಿಳೆಯೊಬ್ಬರ ಗುರುತ್ತಿನ ಚೀಟಿಗಳು ಇದ್ದವು. ಅದರಲ್ಲಿದ್ದ ನಂಬರಿಗೆ ಪೊಲೀಸರು ಕರೆ ಮಾಡಿದ್ದು, ನೀವು ಯಾರು? ನಿಮ್ಮ ಸೂಟ್ಕೇಸ್ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.
ಆಗಲೇ ಆ ಮಹಿಳೆಯರಿಗೆ ತಮ್ಮ ಸೂಟ್ಕೇಸ್ ಎಲ್ಲೋ ಕಳೆದು ಹೋಗಿದೆ ಎನ್ನೋ ವಿಚಾರ ಗಮನಕ್ಕೆ ಬಂದಿರೋದು. ತಕ್ಷಣವೇ ಗಾಬರಿಗೊಂಡ ಮಹಿಳೆಯರು ಆತಂಕದಿಂದ ತಮ್ಮ ಮನೆಯಲ್ಲಿ ಪರದಾಡಿದ್ದಾರೆ. ಬಳಿಕ ಪೊಲೀಸರು ನಿಮ್ಮ ಸೂಟ್ಕೇಸ್ ನಮ್ಮ ಬಳಿ ಇದೆ. ಬೆಳಗ್ಗೆ ಬಂದು ಪಡೆದುಕೊಳ್ಳಿ ಎಂದು ಮಹಿಳೆಗೆ ಮಾಹಿತಿ ನೀಡಿದ್ದಾರೆ.
ನಡೆದಿದ್ದೇನು?
ಸೋಮವಾರಪೇಟೆ ತಾಲೂಕಿನ ಗರಂಗದೂರಿನ ಮಹಿಳೆ ನಫೀಜಾ ಅವರು ತಮ್ಮ ಸಂಬಂಧಿಯೊಂದಿಗೆ ಬೆಂಗಳೂರಿನಿಂದ ಕುಶಾಲನಗರಕ್ಕೆ ಬಸ್ಸಿನಲ್ಲಿ ಬಂದಿದ್ದಾರೆ. ತಡರಾತ್ರಿ ಆಗಿದ್ದರಿಂದ ಕುಶಾಲನಗರದ ಬೈಪಾಸ್ ರಸ್ತೆಯಲ್ಲಿ ಇಳಿದು ಅಲ್ಲಿಂದ ತಮ್ಮ ಸಂಬಂಧಿಯ ಕಾರಿನಲ್ಲಿ ಗರಂಗದೂರಿಗೆ ತೆರಳಿದ್ದಾರೆ. ಬಸ್ಸಿನಿಂದ ಇಳಿದ ನಫೀಜಾ ಕಾರಿಗೆ ಏರುವ ಮುನ್ನ ತಮ್ಮ ಕೈಯಲ್ಲಿದ್ದ ಸೂಟ್ಕೇಸನ್ನು ರಸ್ತೆ ಬದಿಯಲ್ಲಿ ಬಿಟ್ಟಿದ್ದಾರೆ. ಆದರೆ ಅವರು ಊರಿಗೆ ಹೋದರು ಅದರ ಪರಿವೇ ಇಲ್ಲದಂತಾಗಿದೆ. ಇದನ್ನೂ ಓದಿ: ದೀಪಾವಳಿಯ ಫ್ಯಾಮಿಲಿ ಫೋಟೋ ಹಂಚಿಕೊಂಡು ಬಿಗ್ ಬಿ ಸಂಭ್ರಮ
ಬೆಳಗ್ಗೆ ಠಾಣೆಗೆ ಬಂದ ಮಹಿಳೆಯನ್ನು ವಿಚಾರಿಸಿದಾಗ ಈ ಕುರಿತು ಮಾಹಿತಿ ತಿಳಿದುಬಂದಿದೆ. ನಂತರ ಡಿವೈಎಸ್‍ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ ಮಹಿಳೆಗೆ ಚಿನ್ನಾಭರಣ ಮತ್ತು ನಗದನ್ನು ಹಿಂದಿರುಗಿಸಿದ್ದಾರೆ. ಅದೃಷ್ಟವಶಾತ್ ಪೆಟ್ರೋಲ್ ಬಂಕಿನಲ್ಲಿದ್ದ ಯುವಕ ಸೋಮಶೇಖರ್ ಕಣ್ಣಿಗೆ ಬಿದ್ದಿದ್ದರಿಂದ ಅದು ಸುರಕ್ಷಿತವಾಗಿ ವಾಪಸ್ ಮಹಿಳೆಯ ಕೈಸೇರಿದೆ. ಯುವಕನ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪೊಲೀಸರು ಯುವಕನಿಗೆ ಬಹುಮಾನ ನೀಡಿದ್ದಾರೆ.