ಬೆಂಗಳೂರು: ಪೊಲೀಸರು ಅಂದರೆ ಸಾಕು ಭಯಪಡುವ ಸಮಾಜದಲ್ಲಿ ಪೊಲೀಸರು ಹಲವು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅದರಂತೆಯೇ ಮಕ್ಕಳ ಆಟದ ಮೈದಾನವನ್ನು ನಾವೆಲ್ಲರೂ ಶಾಲೆಯಲ್ಲಿ, ಪಾರ್ಕಿನಲ್ಲಿ ನೋಡಿರ್ತೀವಿ. ಆದರೆ ನಗರದ ಹೆಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಕ್ಕಳ ಮನೆಯಿದೆ.
ಹೌದು…ಪೊಲೀಸರು ಜನರಲ್ಲಿ, ಮಕ್ಕಳಲ್ಲಿ ಭಯದ ವಾತಾವರಣ ಹೋಗಲಾಡಿಸಲು ಜನಸ್ನೇಹಿಯಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅದಕ್ಕೆ ಉದಾಹರಣೆ ಎಂಬಂತೆ ಹೆಚ್‌ಎಸ್‌ಆರ್‌ನ ಪೊಲೀಸ್ ಠಾಣೆಯಲ್ಲಿ ಮಕ್ಕಳ ಮನೆಯನ್ನು ಉದ್ಘಾಟನೆ ಮಾಡಲಾಗಿದೆ.
ಸುಮಾರು ಜನ ಠಾಣೆಗೆ ಬಂದು ಹೋಗುತ್ತಾರೆ. ಅವರೊಂದಿಗೆ ಚಿಕ್ಕ ಮಕ್ಕಳನ್ನು ಕರೆತರುತ್ತಾರೆ. ಇದರಿಂದ ಮಕ್ಕಳಲ್ಲಿ ಪೊಲೀಸರು ಅಂದರೆ ಭಯದ ವಾತಾವರಣ ನಿರ್ಮಾಣ ಮಾಡುತ್ತದೆ. ಈ ನಿಟ್ಟಿನಲ್ಲಿ ಅವರಿಗೆ ಒಂದು ಆಟ ಆಡುವ ಮನೆ ಮಾಡಿದರೆ ಚೆನ್ನಾಗಿರುತ್ತೆ ಎಂದುಕೊಂಡಿದ್ದೆ. ಇನ್ಸ್‌ಪೆಕ್ಟರ್ ರಾಘವೇಂದ್ರ ಹಾಗೂ ಅವರ ತಂಡಕ್ಕೆ ಹೇಳಿದಾಗ ಇಷ್ಟು ಚೆನ್ನಾಗಿ ಮಕ್ಕಳ ಆಟದ ಮನೆ ಮಾಡುತ್ತಾರೆ ಅಂತಾ ಅಂದುಕೊಂಡಿರಲಿಲ್ಲ ಎಂದು ಡಿಸಿಪಿ ಇಶಾ ಪಂಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಠಾಣೆಗಳಿಗೆ ಪ್ರತಿನಿತ್ಯ ನೂರಾರು ಜನ ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುತ್ತಾರೆ. ಕೆಲವೊಮ್ಮೆ ತಂದೆ ತಾಯಿಯರು ದೂರನ್ನು ನೀಡಲು ಪೊಲೀಸ್ ಠಾಣೆಗೆ ಬರುವ ಸಂಧರ್ಭದಲ್ಲಿ ತಮ್ಮೊಂದಿಗೆ ಮಕ್ಕಳನ್ನು ಕರೆತರಲಾಗುತ್ತದೆ. ಇದರಿಂದ ಮಕ್ಕಳಲ್ಲಿ ಪೊಲೀಸರು ಮತ್ತು ಪೊಲೀಸ್ ಠಾಣೆಯ ಮೇಲೆ ಭಯ ಬರುವಂತಹ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲೆ ಮಕ್ಕಳ ಮನೆಯನ್ನು ನಿರ್ಮಾಣ ಮಾಡಲಾಗಿದೆ.
ಇಲ್ಲಿ ಬಂದಂತಹ ಪೋಷಕರು ತಮ್ಮ ಮಕ್ಕಳನ್ನು ಕರೆತರುತ್ತಾರೆ. ಆಗ ಮಕ್ಕಳ ಮನೆಯಲ್ಲಿ ಬಿಟ್ಟು ತಮ್ಮ ದೂರನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಇದನ್ನು ನೋಡಿದ ಜನರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹೆಚ್‍ಎಸ್‍ಆರ್ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ರಾಘವೇಂದ್ರ ತಿಳಿಸಿದರು.
ಪೊಲೀಸ್ ಠಾಣೆಯಲ್ಲಿ ಈ ಮಕ್ಕಳ ಮನೆಯನ್ನು ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಹೆಚ್‍ಎಸ್‍ಆರ್ ಪೊಲೀಸ್ ಠಾಣೆ ರಾಜ್ಯದಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ. ಮಕ್ಕಳಲ್ಲಿ ಭಯದ ವಾತಾವರಣ ಹೋಗಲಾಡಿಸುವ ನಿಟ್ಟಿನಲ್ಲಿ ಈ ರೀತಿ ಚಿಂತನೆ ನಿಜಕ್ಕೂ ಮೆಚ್ಚುವಂತದ್ದು.
ಮಾನ್ಯ @DCPSEBCP ಮೇಡಂ ರವರ ಮಾರ್ಗದರ್ಶನದಲ್ಲಿ ಜನಸ್ನೇಹಿ ಪೋಲಿಸ್ ಭಾಗವಾಗಿ ನಮ್ಮ ಠಾಣೆಯಲ್ಲಿ ಮಕ್ಕಳ ಮನೆ children play home ಪ್ರಾರಂಭಿಸಿದೆ ಮಕ್ಕಳಿಗೆ ಸುಂದರ ವಾತಾವರಣ ನಿರ್ಮಿಸುವುದು ನಮ್ಮ ಗುರಿ "#ಪೋಲಿಸ್ ಅಂದರೆ ಭಯವಲ್ಲ ಭರವಸೆ" @BlrCityPolice @hsrlayoutrw @WeAreHSRLayout pic.twitter.com/m5ZdjSG3nj
— HSR LAYOUT BCP (@hsrlayoutps) September 14, 2019